ಸರಕಾರಿ ನೌಕರರು RSS ಸೇರುವುದನ್ನು ನಿಷೇಧಿಸಿದ್ದ ತನ್ನ ‘ತಪ್ಪನ್ನು ಅರಿತುಕೊಳ್ಳಲು’ ಕೇಂದ್ರಕ್ಕೆ ಐದು ದಶಕಗಳು ಬೇಕಾದವು: ಮಧ್ಯಪ್ರದೇಶ ಹೈಕೋರ್ಟ್

Update: 2024-07-26 10:59 GMT

ಸಾಂದರ್ಭಿಕ ಚಿತ್ರ (PTI)

ಭೋಪಾಲ: ಸರಕಾರಿ ನೌಕರರು ‘ಅಂತರರಾಷ್ಟ್ರೀಯ ಖ್ಯಾತಿ’ಯ ಆರೆಸ್ಸೆಸ್‌ ಅನ್ನು ಸೇರುವುದನ್ನು ನಿಷೇಧಿಸಿದ್ದ ತನ್ನ ‘ತಪ್ಪನ್ನು ಅರಿತುಕೊಳ್ಳಲು’ ಕೇಂದ್ರ ಸರಕಾರಕ್ಕೆ ಐದು ದಶಕಗಳೇ ಬೇಕಾದವು ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಹೇಳಿದೆ.

ನಿಷೇಧವನ್ನು ಪ್ರಶ್ನಿಸಿ ನಿವೃತ್ತ ಕೇಂದ್ರ ಸರಕಾರಿ ನೌಕರ ಪುರುಷೋತ್ತಮ ಗುಪ್ತಾ ಸೆಪ್ಟಂಬರ್ 2023ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಗುರುವಾರ ವಿಲೇವಾರಿಗೊಳಿಸಿದ ಉಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಆರೆಸ್ಸೆಸ್‌ ಅನ್ನು ತಪ್ಪಾಗಿ ನಿಷೇಧಿತ ಸಂಘಟನೆಗಳ ಗುಂಪಿಗೆ ಸೇರಿಸಿದ್ದರಿಂದ ಈ ಐದು ದಶಕಗಳಲ್ಲಿ ದೇಶಕ್ಕೆ ಹಲವು ವಿಧಗಳಲ್ಲಿ ಸೇವೆ ಸಲ್ಲಿಸುವ ಅನೇಕ ಕೇಂದ್ರ ಸರಕಾರಿ ನೌಕರರ ಮಹತ್ವಾಕಾಂಕ್ಷೆಗಳಿಗೆ ತಣ್ಣೀರೆರಚಲ್ಪಟ್ಟಿತ್ತು ಎಂದು ನ್ಯಾಯಮೂರ್ತಿಗಳಾದ ಸುಶ್ರುತ ಅರವಿಂದ ಧರ್ಮಾಧಿಕಾರಿ ಮತ್ತು ಗಜೇಂದ್ರ ಸಿಂಗ್ ಅವರನ್ನೊಳಗೊಂಡ ಪೀಠವು ಹೇಳಿತು.

ಸರಕಾರಿ ನೌಕರರು ಆರೆಸ್ಸೆಸ್‌ ಅನ್ನು ಸೇರುವುದನ್ನು ನಿಷೇಧಿಸಿದ್ದ 58 ವರ್ಷಗಳಷ್ಟು ಹಿಂದಿನ ಆದೇಶವನ್ನು ಕೇಂದ್ರವು ಇತ್ತೀಚಿಗೆ ಹಿಂದೆಗೆದುಕೊಂಡಿದೆ. ಈ ನಿಷೇಧವನ್ನು 1966ರಲ್ಲಿ ಹೇರಲಾಗಿತ್ತು.

ನಿಷೇಧವನ್ನು ಹಿಂದೆಗೆದುಕೊಂಡ ಬಳಿಕ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ)ಯು ಈ ಸಂಬಂಧ ತನ್ನ ಜು.9ರ ಕಚೇರಿ ಜ್ಞಾಪಕ ಪತ್ರ ಕುರಿತು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು.

ಗುಪ್ತಾ ತನ್ನ ಅರ್ಜಿಯಲ್ಲಿ ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳು,1964ರ ವಿವಿಧ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವ ಮತ್ತು ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದರು.

ಸರಕಾರಿ ನೌಕರರು ಆರೆಸ್ಸೆಸ್‌ಗೆ ಸೇರುವುದರ ಮೇಲೆ ನಿಷೇಧವನ್ನು ಹೇರಿದ್ದಾದರೂ ಏಕೆ ಎಂದು ಪ್ರಶ್ನಿಸಿದ ನ್ಯಾಯಾಲಯವು, ಸಂಘಪರಿವಾರದ ರಾಜಕೀಯೇತರ ಸಂಘಟನೆಗಳಿಗೂ ಈ ನಿಷೇಧವನ್ನು ಅನ್ವಯಿಸಿದ್ದರ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿತು.

ಜು.9ರ ಆದೇಶವನ್ನು ತಮ್ಮ ಜಾಲತಾಣಗಳ ಮುಖಪುಟಗಳಲ್ಲಿ ಪ್ರದರ್ಶಿಸುವಂತೆ ಡಿಒಪಿಟಿ ಮತ್ತು ಕೇಂದ್ರ ಗೃಹವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡಿದ ಉಚ್ಚ ನ್ಯಾಯಾಲಯವು,ಮಾಹಿತಿಯನ್ನು 15 ದಿನಗಳಲ್ಲಿ ತನ್ನ ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ತಿಳಿಸುವಂತೆಯೂ ಸರಕಾರಕ್ಕೆ ಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News