ಡಾ. ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕ ಅಂತ್ಯಕ್ರಿಯೆ ಸ್ಥಳ ನಿಗದಿಗೊಳಿಸದೆ ಬಿಜೆಪಿ ಅವರನ್ನು ಸಂಪೂರ್ಣವಾಗಿ ಅವಮಾನಿಸಿದೆ: ಕಾಂಗ್ರೆಸ್ ಆರೋಪ

Update: 2024-12-29 11:55 GMT

PC: x.com/mr_mayank

ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಭವಿಷ್ಯದಲ್ಲಿ ಸ್ಮಾರಕವನ್ನಾಗಿ ರೂಪಿಸಬಹುದಾದ ಪ್ರತ್ಯೇಕ ಸ್ಥಳದಲ್ಲಿ ನಡೆಸುವ ಬದಲು, ದಿಲ್ಲಿಯ ನಿಗಮ್ ಬೋದ್ ಘಾಟ್ ನಲ್ಲಿ ನಡೆಸುವ ಮೂಲಕ, ಅವರನ್ನು ಸಂಪೂರ್ಣವಾಗಿ ಅವಮಾನಿಸಿದೆ ಎಂದು ಶನಿವಾರ ಕಾಂಗ್ರೆಸ್ ಆರೋಪಿಸಿದೆ.

92 ವರ್ಷದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಗುರುವಾರ ನಿಧನರಾದರು. ಶನಿವಾರ ಸಕಲ ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು.

ನಂತರ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಭಾರತ ಮಾತೆಯ ಅದ್ಭುತ ಪುತ್ರ ಹಾಗೂ ಸಿಖ್ ಸಮುದಾಯದ ಪ್ರಪ್ರಥಮ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ನಿಗಮ್ ಬೋಧ್ ಘಾಟ್ ನಲ್ಲಿ ನೆರವೇರಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅವರನ್ನು ಸಂಪೂರ್ಣವಾಗಿ ಅವಮಾನಿಸಿದೆ” ಎಂದು ಆರೋಪಿಸಿದ್ದಾರೆ.

“ಇಲ್ಲಿಯವರೆಗೆ ಎಲ್ಲ ಮಾಜಿ ಪ್ರಧಾನಿಗಳ ಘನತೆಯನ್ನು ಗೌರವಿಸಲು, ಅವರಿಗೆ ಗೌರವ ನಮನ ಸಲ್ಲಿಸಲು ಬಯಸುವ ಯಾವುದೇ ವ್ಯಕ್ತಿಗೆ ಅನನುಕೂಲವಾಗದಂತೆ ಅಧಿಕೃತ ರುದ್ರಭೂಮಿಗಳಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತಿತ್ತು” ಎಂದೂ ಅವರು ಹೇಳಿದ್ದಾರೆ.

“ಕೇಂದ್ರ ಸರಕಾರ ಭಾರತ ಮಾತೆಯ ಅದ್ಭುತ ಪುತ್ರ ಹಾಗೂ ಅವರ ಹೆಮ್ಮೆಯ ಸಮುದಾಯಕ್ಕೆ ಗೌರವ ತೋರಿಸಬೇಕಿತ್ತು” ಎಂದೂ ಲೋಕಸಭಾ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, “ಡಾ. ಮನಮೋಹನ್ ಸಿಂಗ್ ಅವರ ನಿಧನವನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ರಾಜಕೀಕರಣಗೊಳಿಸುತ್ತಿದೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News