ಕೇಂದ್ರದ ಸಕಾಲಿಕ ಮಧ್ಯಪ್ರವೇಶದಿಂದ ಮಣಿಪುರ ಸ್ಥಿತಿಯಲ್ಲಿ ಸುಧಾರಣೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಕೇಂದ್ರದ ಸಕಾಲಿಕ ಮಧ್ಯಪ್ರವೇಶ ಮತ್ತು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಮಣಿಪುರದ ಸ್ಥಿತಿಯಲ್ಲಿ ಗಣನೀಯವಾಗಿ ಸುಧಾರಣೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ಸಂಘರ್ಷವನ್ನು ಪರಿಹರಿಸಲು ನಾವು ನಮ್ಮ ಅತ್ಯುತ್ತಮ ಸಂಪನ್ಮೂಲಗಳು ಮತ್ತು ಆಡಳಿತ ಯಂತ್ರವನ್ನು ಬಳಸಿದ್ದೇವೆ. ಈ ಸನ್ನಿವೇಶವನ್ನು ಸೂಕ್ಷ್ಮವಾಗಿ ನಿಭಾಯಿಸುವುದು ನಮ್ಮ ಸಂಘಟಿತ ಜವಾಬ್ದಾರಿಯಾಗಿದೆ ಎಂದು ನಾವು ನಂಬಿದ್ದೇವೆ,” ಎಂದು ಪ್ರಧಾನಿ ಹೇಳಿದ್ದಾರೆ.
ಮಣಿಪುರದಲ್ಲಿ ಸಂಘರ್ಷ ತಾರಕಕ್ಕೇರಿದ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಲ್ಲಿಯೇ ಉಳಿದು ಸಮಸ್ಯೆ ಪರಿಹಾರಕ್ಕೆ ಸಂಬಂಧಿತರೊಂದಿಗೆ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.
ರಾಜ್ಯದ ಸನ್ನಿವೇಶ ಸುಧಾರಿಸಲು ಹಾಗೂ ಪರಿಹಾರ ಶಿಬಿರಗಳಲ್ಲಿರುವವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಆರ್ಥಿಕ ಸಹಾಯ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈಶಾನ್ಯ ಭಾರತವು ನವಭಾರತದ ಅತ್ಯಂತ ಯಶಸ್ವಿ ಕಥೆಯಾಗಿ ಹೊರಹೊಮ್ಮಿದೆ ಎಂದೂ ಪ್ರಧಾನಿ ಹೇಳಿದರು.