ಆಂಧ್ರಪ್ರದೇಶ | ವೈಎಸ್ ಆರ್ ಆಡಳಿತದಲ್ಲಿ ರಚಿಸಿದ್ದ ವಕ್ಫ್ ಮಂಡಳಿಯನ್ನು ವಿಸರ್ಜಿಸಿದ ಸರಕಾರ
ವಿಜಯವಾಡ: ಆಂಧ್ರಪ್ರದೇಶದ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ, ಹಿಂದಿನ ವೈಎಸ್ಆರ್ ಕಾಂಗ್ರೆಸ್ ಆಡಳಿತದಲ್ಲಿನ ವಕ್ಫ್ ಮಂಡಳಿಯನ್ನು ವಿಸರ್ಜಿಸಿದ್ದು, ಶೀಘ್ರದಲ್ಲೇ ಹೊಸ ಮಂಡಳಿಯನ್ನು ರಚಿಸಲಿದೆ ಎಂದು ಹೇಳಲಾಗಿದೆ.
ವಕ್ಫ್ (ತಿದ್ದುಪಡಿ) ಮಸೂದೆ-2024ರ ಕುರಿತು ಚರ್ಚೆ ನಡೆಯುತ್ತಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ. ವಕ್ಫ್ ಮಂಡಳಿಯ ಅಧ್ಯಕ್ಷರ ಆಯ್ಕೆಗೆ ಹೈಕೋರ್ಟ್ ತಡೆ ನೀಡಿದ ಹಿನ್ನೆಲೆ ಮಂಡಳಿಯು ದೀರ್ಘಕಾಲದಿಂದ ನಿಷ್ಕ್ರಿಯಗೊಂಡಿತ್ತು. ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ನವೆಂಬರ್ 30ರ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ ಮತ್ತು ವ್ಯಾಜ್ಯವನ್ನು ಪರಿಹರಿಸಲು ಮತ್ತು ಆಡಳಿತಾತ್ಮಕ ಸಮಸ್ಯೆ ಪರಿಹರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
2023ರ ಅಕ್ಟೋಬರ್ 21ರಂದು ಶೇಕ್ ಖಾಜಾ, ಮುತವಲ್ಲಿ, ಶಾಸಕ ಹಫೀಜ್ ಖಾನ್ ಮತ್ತು ಎಂಎಲ್ಸಿ ರುಹುಲ್ಲಾ ಅವರನ್ನು ವಕ್ಫ್ ಬೋರ್ಡ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಮತ್ತು ಎಂಟು ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಶೇಕ್ ಖಾಜಾ ಅವರ ಆಯ್ಕೆ ಮತ್ತು ವಕ್ಫ್ ಬೋರ್ಡ್ ಕಾನೂನುಬದ್ಧತೆ ಪ್ರಶ್ನಿಸಿ ಅನೇಕ ರಿಟ್ ಅರ್ಜಿಗಳನ್ನು ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು.