ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ನಾಳೆ(ಜೂ.12) ಚಂದ್ರಬಾಬು ನಾಯ್ಡು ಪ್ರಮಾಣ ವಚನ

Update: 2024-06-11 17:17 GMT

 N. ಚಂದ್ರಬಾಬು ನಾಯ್ಡು | PC : PTI 

ಅಮರಾವತಿ : ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯ ಮುಖ್ಯಸ್ಥ N. ಚಂದ್ರಬಾಬು ನಾಯ್ಡು ಅವರು ಜೂ.12ರಂದು ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅವರ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಮೈತ್ರಿಕೂಟವು 175 ಸದಸ್ಯಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ 164 ಸ್ಥಾನಗಳನ್ನು ಗಳಿಸುವ ಮೂಲಕ ಭರ್ಜರಿಯಾಗಿ ಅಧಿಕಾರಕ್ಕೆ ಮರಳಿದೆ. ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದ್ದು ಮಾತ್ರವಲ್ಲ, ಅವರ ಟಿಡಿಪಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ಎರಡನೇ ಅತ್ಯಂತ ದೊಡ್ಡ ಪಕ್ಷವಾಗುವುದರೊಂದಿಗೆ ನಾಯ್ಡು ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ನಾಯ್ಡು ಮಂಗಳವಾರ ಆಂಧ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಝೀರ್ ಅವರನ್ನು ಭೇಟಿಯಾಗಿ ಮುಂದಿನ ಸರಕಾರ ರಚನೆಯ ಹಕ್ಕು ಮಂಡಿಸಿದರು.

‘ನಾನು ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಲು ಬಿಜೆಪಿ, ಜನಸೇನಾ ಮತ್ತು ಟಿಡಿಪಿಯ ಎಲ್ಲ ಶಾಸಕರು ಒಪ್ಪಿಗೆ ನೀಡಿದ್ದಾರೆ ’ ಎಂದು ಎನ್ಡಿಎ ಶಾಸಕರ ಸಭೆಯ ಬಳಿಕ ನಾಯ್ಡು ಸುದ್ದಿಗಾರರಿಗೆ ತಿಳಿಸಿದರು.

ನಾಯ್ಡು ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡಲು ಮೀಸಲಾಗಿದ್ದ ಹಣದ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಎರಡು ತಿಂಗಳು ಜೈಲುವಾಸವನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಅವರು ಅಧಿಕಾರಕ್ಕೆ ಮರಳಿರುವುದು ನಾಟಕೀಯ ವಿದ್ಯಮಾನವಾಗಿದೆ.

ನಾಯ್ಡು ಜೂ.12ರಂದು, ಬುಧವಾರ ಪೂರ್ವಾಹ್ನ 11:27ಕ್ಕೆ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಜಯವಾಡಾ ನಗರದ ಹೊರವಲಯದ ಗನ್ನಾವರಂ ವಿಮಾನ ನಿಲ್ದಾಣ ಸಮೀಪದ ಕೇಸರಪಲ್ಲಿ ಐಟಿ ಪಾರ್ಕ್ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ಡಿಎ ಇತರ ಹಿರಿಯ ನಾಯಕರು ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ನಾಯ್ಡು ಅವರ ಟಿಡಿಪಿ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅತ್ಯಂತ ಹೆಚ್ಚಿನ, 135 ಶಾಸಕರನ್ನು ಹೊಂದಿದೆ. ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾ 21 ಮತ್ತು ಬಿಜೆಪಿ ಎಂಟು ಶಾಸಕರನ್ನು ಹೊಂದಿವೆ.

*ಪವನ್ ಕಲ್ಯಾಣ್ ಆಯ್ಕೆ

ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಜನಸೇನಾದ ಸದನ ನಾಯಕರಾಗಿ ಪವನ್ ಕಲ್ಯಾಣ್ ಮಂಗಳವಾರ ಆಯ್ಕೆಯಾಗಿದ್ದಾರೆ. ಪಕ್ಷದ ತೆನಾಲಿ ಶಾಸಕ ಎನ್.ಮನೋಹರ ಅವರು ಸದನ ನಾಯಕನಾಗಿ ಪವನ್ ಕಲ್ಯಾಣ್ ಹೆಸರನ್ನು ಸೂಚಿಸಿದರು ಮತ್ತು ಇತರ ಶಾಸಕರು ಅದನ್ನು ಸರ್ವಾನುಮತದಿಂದ ಅನುಮೋದಿಸಿದರು ಎಂದು ಜನಸೇನಾ ಮೂಲಗಳು ತಿಳಿಸಿದವು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News