ಚೆನ್ನೈ ವಿಮಾನನಿಲ್ದಾಣ | ನಟ ಕರುಣಾಸ್‌ ಬ್ಯಾಗ್‌ನಲ್ಲಿದ್ದ 40 ಬುಲೆಟ್‌ಗಳು ಪತ್ತೆ

Update: 2024-06-02 17:16 GMT

ನಟ ಕರುಣಾಸ್‌ | PC : NDTV  

ಚೆನ್ನೈ : ತಮಿಳು ಚಲನಚಿತ್ರ ನಟ-ರಾಜಕಾರಣಿ ಕರುಣಾಸ್‌ ಅವರ ಹ್ಯಾಂಡ್‌ಬ್ಯಾಗ್‌ನಲ್ಲಿ ಪತ್ತೆಯಾದ 40 ಸಜೀವ ಬುಲೆಟ್‌ಗಳನ್ನು ಚೆನ್ನೈವಿಮಾನನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.

ಕರುಣಾಸ್‌ ಅವರು ರವಿವಾರ ಚೆನ್ನೈನಿಂದ ತಿರುಚ್ಚಿಗೆ ವಿಮಾನದಲ್ಲಿ ತೆರಳಲು ವಿಮಾನನಿಲ್ದಾಣಕ್ಕೆ ಆಗಮಿಸಿದ್ದರು. ಪ್ರಯಾಣಿಕರ ಬ್ಯಾಗ್‌ಗಳನ್ನು ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾಗ, ಕರುಣಾಸ್‌ ಅವರ ಹ್ಯಾಂಡ್‌ಬ್ಯಾಗ್‌ನಲ್ಲಿದ್ದ 40 ಸಜೀವ ಗುಂಡುಗಳು ಪತ್ತೆಯಾದವು. ಕೂಡಲೇ ಅವುಗಳನ್ನು ವಶಪಡಿಸಿಕೊಂಡ ಭದ್ರತಾ ಅಧಿಕಾರಿಗಳು, ಕರುಣಾಸ್‌ರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದರು.

ಕರುಣಾಸ್‌ ಅವರ ಹ್ಯಾಂಡ್‌ಬ್ಯಾಗ್‌ನಲಿದ್ದ ಎರಡು ಪೆಟ್ಟಿಗೆಗಳಲ್ಲಿ 32 ಕ್ಯಾಲಿಬರ್‌ನ ಬುಲೆಟ್‌ಗಳಿದ್ದವೆಂದು ವಿಮಾನನಿಲ್ದಾಣದ ಮೂಲಗಳು ತಿಳಿಸಿವೆ.

ತನ್ನ ಆತ್ಮರಕ್ಷಣೆಗಾಗಿ ಪರವಾನಿಗೆಯಿರುವ ಹ್ಯಾಂಡ್‌ಗನ್ ಅನ್ನು ತಾನು ಹೊಂದಿರುವುದಾಗಿ ಕರುಣಾಸ್‌ ಅವರು ವಿಚಾರಣೆಯ ವೇಳೆ ತಿಳಿಸಿದ್ದಾರೆನ್ನಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಾನು ದಿಂಡಿಗಲ್ ಜಿಲ್ಲೆಯಲ್ಲಿರುವ ತನ್ನ ಊರಿನ ಪೊಲೀಸ್ ಠಾಣೆಯಲ್ಲಿ ಹ್ಯಾಂಡ್‌ಗನ್ ಒಪ್ಪಿಸಿದ್ದೇನೆ. ಆದರೆ ಆಕಸ್ಮಿಕವಾಗಿ 40 ಸಜೀವ ಗುಂಡುಗಳು ಬ್ಯಾಗ್‌ನಲ್ಲಿ ಉಳಿದಿದ್ದವು ಎಂದು ಅವರು ವಿಚಾರಣೆಯ ವೇಳೆ ಭದ್ರತಾ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ತನ್ನ ಹೇಳಿಕೆಗೆ ಸಮರ್ಥನೆಯಾಗಿ ಕರುಣಾಸ್‌ ಅವರು ಪೊಲೀಸ್‌ ಠಾಣೆಗೆ ತಾನು ಒಪ್ಪಿಸಿರುವ ಹ್ಯಾಂಡ್‌ಗನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಕೂಡಾ ತೋರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ತನಿಖೆ ನಡೆಸಿದ ಭದ್ರತಾ ಅಧಿಕಾರಿಗಳು, ಅವರು ಸಲ್ಲಿಸಿರುವ ಎಲ್ಲಾ ದಾಖಲೆಗಳು ಅಧಿಕೃತವಾದುದೆಂಬುದನ್ನು ಕಂಡುಕೊಂಡರು. ಕಾನೂನಿಗೆ ವಿರುದ್ಧವಾಗಿ ಬುಲೆಟ್‌ಗಳನ್ನು ವಿಮಾನದಲ್ಲಿ ಕೊಂಡೊಯ್ಯಕೂಡದೆಂದು ಕರುಣಾಸ್‌ಅವರಿಗೆ ತಿಳಿಸಿದರು ಹಾಗೂ ಹ್ಯಾಂಡ್‌ಬ್ಯಾಗ್ ಹಿಂತಿರುಗಿಸಿದರೆಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News