ಚೆನ್ನೈನಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ
ಚೆನ್ನೈ: ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಎಂಟು ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಚೆನ್ನೈನಲ್ಲಿ ನಿನ್ನೆ ರಾತ್ರಿಯಿಂದ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಹೀಗಾಗಿ ಚೆನ್ನೈ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಶಾಲಾ ಕಾಲೇಜುಗಳಿಗೆ ರಾಜ್ಯ ಸರಕಾರ ರಜೆ ಘೋಷಿಸಿದೆ.
ಬೆಳಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚೆನ್ನೈನ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ಅಕ್ಟೋಬರ್ 15ರಿಂದ ಅಕ್ಟೋಬರ್ 18ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೂಚನೆ ನೀಡಿವೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ರಾಜಧಾನಿಯಲ್ಲಿ ಮುಂಚಿತವಾಗಿಯೇ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಹಾಗೂ ತಮಿಳುನಾಡು ವಿಪತ್ತು ಸ್ಪಂದನಾ ಪಡೆಗಳನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.