ಅಧಿಕಾರಕ್ಕೆ ಮರಳಿದರೆ ಎಲ್‌ಪಿಜಿಗೆ 500 ರೂ.ಸಬ್ಸಿಡಿ, ಸ್ವಸಹಾಯ ಗುಂಪುಗಳ ಸಾಲ ಮನ್ನಾ: ಪ್ರಿಯಾಂಕಾ ಗಾಂಧಿ ಘೋಷಣೆ
ರಾಯಪುರ: ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ ಪ್ರತಿ ಎಲ್‌ಪಿಜಿ ಸಿಲಿಂಡರ್ ಮೇಲೆ 500 ರೂ.ಗಳ ಸಹಾಯಧನ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮತ್ತು ರಸ್ತೆ ಅಪಘಾತದ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಸೇರಿದಂತೆ ಹಲವಾರು ಗ್ಯಾರಂಟಿಗಳನ್ನು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿಯವರು ಸೋಮವಾರ ಪ್ರಕಟಿಸಿದರು.
ಖೈರಗಡ ವಿಧಾನಸಭಾ ಕ್ಷೇತ್ರದ ಜಲಬಂಧಾದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ, ರಾಜ್ಯದಲ್ಲಿನ ಸುಮಾರು 6,000 ಸರಕಾರಿ ಉನ್ನತ ಮಾಧ್ಯಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳನ್ನು ಸ್ವಾಮಿ ಆತ್ಮಾನಂದ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದೂ ಹೇಳಿದರು.
ಪ್ರತಿ ಎಲ್‌ಪಿಜಿ ಸಿಲಿಂಡರ್ ಮೇಲೆ 500 ರೂ.ಗಳ ಸಹಾಯ ಧನವನ್ನು ಒದಗಿಸಲು ಮಹಿಳೆಯರಿಗಾಗಿ ಮಹತಾರಿ ನ್ಯಾಯ ಯೋಜನೆಯನ್ನು ಆರಂಭಿಸಲಾಗುವುದು. ಸ್ವಸಹಾಯ ಸಂಘಗಳ ಮತ್ತು ಸಕ್ಷಮ ಯೊಜನೆಯಡಿ ಮಹಿಳೆಯರು ಪಡೆದಿರುವ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಮುಖ್ಯಮಂತ್ರಿಗಳ ವಿಶೇಷ ಆರೋಗ್ಯ ನೆರವು ಯೋಜನೆಯಡಿ ರಸ್ತೆ ಅಪಘಾತಗಳು ಮತ್ತು ಇತರ ಆಕಸ್ಮಿಕಗಳ ಸಂತ್ರಸ್ತರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಾಗುವುದು. ತಿವರಾ (ಒಂದು ವಿಧದ ಬೇಳೆ)ವನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದರು.
ಬಿಜೆಪಿ ವಿರುದ್ಧ ದಾಳಿ ನಡೆಸಿದ ಪ್ರಿಯಾಂಕಾ, ಧರ್ಮದ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸಿ ನಿಮ್ಮ ಬದುಕಿನಲ್ಲಿ ಕೇವಲ ಸಮಸ್ಯೆಗಳನ್ನುಂಟು ಮಾಡುವ ಪಕ್ಷಕ್ಕೆ ಮತ ನೀಡುತ್ತಿರೋ ಅಥವಾ ನಿಮ್ಮ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುವ ಪಕ್ಷಕ್ಕೆ ಮತ ನೀಡುತ್ತಿರೋ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ಹೇಳಿದರು.