ಚತ್ತೀಸ್ಗಢ: ಅಬಕಾರಿ ಹಗರಣ ಈ.ಡಿ. ತನಿಖೆಗೆ ಸುಪ್ರೀಂಕೋರ್ಟ್ ತಡೆ

Update: 2023-07-19 16:41 GMT

ಸುಪ್ರೀಂ ಕೋರ್ಟ್ | Photo : PTI 

ಹೊಸದಿಲ್ಲಿ: ಚತ್ತೀಸ್ಗಢದ 2,000 ಕೋ.ರೂ. ಅಬಕಾರಿ ಹಗರಣದ ಆರೋಪಕ್ಕೆ ಸಂಬಂಧಿಸಿದ ಜಾರಿ ನಿರ್ದೇಶನಾಲಯ (ಈ.ಡಿ.)ದ ತನಿಖೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಈ ಹಣ ಅಕ್ರಮ ವರ್ಗಾವಣೆ ಆರೋಪ ಕುರಿತಂತೆ ಜಾರಿ ನಿರ್ದೇಶನಾಲಯ ಆರಂಭಿಸಿದ ಪ್ರಕ್ರಿಯೆಯ ಕಾನೂನುಬದ್ಧತೆ ಪ್ರಶ್ನಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ಈ ಆದೇಶ ನೀಡಿದೆ.

 ರಾಜ್ಯ ಸರಕಾರದ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಇತರ ವ್ಯಕ್ತಿಗಳನ್ನು ಒಳಗೊಂಡ ಗುಂಪು ದೇಶಿ ಮದ್ಯದ ಪ್ರತಿ ಕೇಸ್ಗೆ 75 ರೂ. ಕಮಿಷನ್ ನೀಡುವವರಿಂದ ಮಾತ್ರ ಸರಕಾರಿ ಸ್ವಾಮ್ಯದ ಕಂಪೆನಿ ಮದ್ಯ ಖರೀದಿಸುವಂತೆ ನೋಡಿಕೊಳ್ಳಲು ಪಿತೂರಿ ನಡೆಸಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಈ ಗುಂಪು ರಾಜ್ಯ ಸರಕಾರದ ಬೊಕ್ಕಸಕ್ಕೆ ಸೇರಬೇಕಾಗಿದ್ದ 2,000 ಕೋ. ರೂ.ಗೂ ಅಧಿಕ ಹಣವನ್ನು ತನ್ನ ಜೇಬಿಗೆ ಇಳಿಸಿದೆ ಎಂದು ಅದು ಆರೋಪಿಸಿದೆ.

 ಯಾವುದೇ ನ್ಯಾಯವ್ಯಾಪ್ತಿ ಇಲ್ಲದೆ ಹಾಗೂ ಮುಖ್ಯಮಂತ್ರಿ ಭೂಪೇಶ್ ಬಾೇಲ್ ಅವರನ್ನು ಸಿಲುಕಿಸುವ ಉದ್ದೇಶದಿಂದ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ ಎಂದು ಈ ಪ್ರಕರಣದ ದೂರರಲ್ಲಿ ಒಬ್ಬರಾಗಿರುವ ಚತ್ತೀಸ್ಗಢ ಸರಕಾರ ಪ್ರತಿಪಾದಿಸಿದೆ. ‘‘ಭೀತಿಯ ವಾತಾವರಣ ನಿರ್ಮಾಣ ಮಾಡಬೇಡಿ’’ ಎಂದು ಸುಪ್ರೀಂ ಕೋರ್ಟ್ ಮೇ 16ರಂದು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತ್ತು.

 ಮಂಗಳವಾರ ಚತ್ತೀಸ್ಗಢ ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು, ಜಾರಿ ನಿರ್ದೇಶನಾಲಯ ಸರಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇತರ ಕೆಲವು ದೂರುದಾರರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಎ.ಎಂ. ಸಿಂಘ್ವಿ, ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಗೆ ತಡೆ ನೀಡಿ ಆದೇಶ ಜಾರಿಗೊಳಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದರು.



Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News