ತಮಿಳುನಾಡಿನ ನಾಗರಿಕ ಸೇವಾ ಆಕಾಂಕ್ಷಿಗಳಿಗೆ 10 ತಿಂಗಳ ಕಾಲ ಮಾಸಿಕ ರೂ. 7,500 ಉದ್ಯೋಗ ಭತ್ಯೆ: ಉದಯನಿಧಿ ಸ್ಟಾಲಿನ್

Update: 2023-10-14 16:05 GMT

Photo : twitter

ಚೆನ್ನೈ: ತಮಿಳುನಾಡು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ರೂ. 7,500 ಉದ್ಯೋಗ ಭತ್ಯೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಶನಿವಾರ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಪ್ರಕಟಿಸಿದ್ದಾರೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಯುವ ಜನ ಸೇವಾ ಮತ್ತು ಕ್ರೀಡಾಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್, “ಕೇಂದ್ರ ಲೋಕಸೇವಾ ಆಯೋಗ, ಭಾರತೀಯ ಬ್ಯಾಂಕಿಂಗ್ ಸೇವೆ, ರೈಲ್ವೆ ಯಾವುದೇ ಉದ್ಯೋಗಗಳಿರಲಿ ನಮ್ಮ ದ್ರಾವಿಡ ಮಾದರಿಯ ಗುರಿ ಆ ಉದ್ಯೋಗಗಳನ್ನು ಪಡೆಯುವುದು. ಕರುಣಾನಿಧಿಯವರು ಮೊದಲ ತಲೆಮಾರಿನ ಕುಟುಂಬದಿಂದ ಪದವೀಧರರು ಹೊರಬರುವುದನ್ನು ಬಯಸಿದ್ದರು. ಪೆರಿಯಾರ್ ,ಅಣ್ಣಾ ಹಾಗೂ ಕರುಣಾನಿಧಿ ಅವರು ಯುವಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿದ್ದರು. ಅದೇ ರೀತಿಯಲ್ಲಿ ನಮ್ಮ ಮುಖ್ಯಮಂತ್ರಿ ಸ್ಟಾಲಿನ್ ಕೂಡಾ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

“ ನಾನ್ ಮುಧಲ್ವನ್ “ಯೋಜನೆಯು ಅದ್ಭುತ ಯೋಜನೆಯಾಗಿದ್ದು, ಅದರಿಂದ 13 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಿದೆ; 1.5 ಲಕ್ಷ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದೆ. ಯುವಜನರಿಗೆ ಕೇಂದ್ರ ಸರ್ಕಾರಿ ಉದ್ಯೋಗ ದೊರೆಯಬೇಕಿದೆ. ಈ ನಾನ್ ಮುಧಲ್ವನ್ ಯೋಜನೆಯು ಯುವಜನರ ಕನಸು ನನಸು ಮಾಡಲು ನೆರವು ನೀಡಲಿದೆ, ಎಂದೂ ಅವರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ ಒದಗಿಸುತ್ತಿರುವ ಹಲವಾರು ಸೌಲಭ್ಯಗಳಿದ್ದರೂ, ರಾಜ್ಯದಲ್ಲಿ ಯುವಜನರ ಭಾಗವಹಿಸುವಿಕೆಯು ಕುಂಠಿತಗೊಂಡಿದೆ ಎಂದು ಅವರು ವಿಷಾದಿಸಿದ್ದಾರೆ.

“ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ ಒದಗಿಸುತ್ತಿರುವ ಹಲವಾರು ಸೌಲಭ್ಯ ನೀಡುತ್ತಿದ್ದರೂ , ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ರಾಜ್ಯದ ವಿದ್ಯಾರ್ಥಿಗಳ ಪ್ರಮಾಣ ತುಂಬಾ ಕಡಿಮೆಯಿದೆ , ಇದು ಆಘಾತಕಾರಿಯಾಗಿದೆ. ಒಂದು ಸಮಯದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ತಮಿಳುನಾಡು ಯುವಜನರ ಪ್ರಮಾಣ ಶೇ. 10ರಷ್ಟಿತ್ತು. ಆದರೆ, 2016ರ ನಂತರ ಈ ಪ್ರಮಾಣವು ಕೇವಲ ಶೇ. 5ಕ್ಕೆ ಕುಸಿತ ಕಂಡಿದೆ. ಹೀಗಾಗಿಯೇ ನಾವು ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಯುವ ಆಕಾಂಕ್ಷಿಗಳಿಗೆ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿದೆವು. ಇದೀಗ ನಾವು ಆರ್ಥಿಕ ನೆರವನ್ನೂ ಹಂಚಿಕೆ ಮಾಡುತ್ತಿದ್ದೇವೆ. ಈ ಯೋಜನೆಯ ಮೂಲಕ ನಾವು 1,000 ವಿದ್ಯಾರ್ಥಿಗಳಿಗೆ 10 ತಿಂಗಳ ಕಾಲ ಮಾಸಿಕ ರೂ. 7,500 ವಿತರಿಸಲಿದ್ದೇವೆ” ಎಂದು ಅವರು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News