14ನೇ ದಿನಕ್ಕೆ ಕಾಲಿರಿಸಿದ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಅಮರಣಾಂತ ಉಪವಾಸ

Update: 2024-03-19 16:36 GMT

ಸೋನಮ್ ವಾಂಗ್ಚುಕ್ | Photo: X \ @Wangchuk66

ಲಡಾಖ್ : ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ ಗೆ ಸಾಂವಿಧಾನಿಕ ಸುರಕ್ಷತೆ ಹಾಗೂ ಕೈಗಾರಿಕೆ, ಗಣಿಗಾರಿಕೆ ಲಾಬಿಗಳಿಂದ ಪರಿಸರ ಸೂಕ್ಷ್ಮ ಪ್ರದೇಶವಾದ ಲಡಾಖ್‌ ನ ಪರಿಸರ ವ್ಯವಸ್ಥೆಯ ರಕ್ಷಣೆ ಆಗ್ರಹಿಸಿ ಖ್ಯಾತ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಅಮರಣಾಂತ ಉಪವಾಸ 14ನೇ ದಿನಕ್ಕೆ ಕಾಲಿರಿಸಿದೆ.

ಲಡಾಖ್‌ ನ ಪರಿಸರ ಹಾಗೂ ಸ್ಥಳೀಯ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗೆ ನೀಡಿದ ಭರವಸೆಗಳನ್ನು ಕೇಂದ್ರ ಸರಕಾರಕ್ಕೆ ನೆನಪಿಸಲು ಬಯಸುವ ಹಲವು ಸ್ಥಳೀಯರೊಂದಿಗೆ ಸೋನಮ್ ವಾಂಗ್ಚುಕ್ ಅಮರಣಾಂತ ಉಪವಾಸ ಮುಂದುವರಿಸಿದ್ದಾರೆ.

‘‘ಲಡಾಖ್‌ ನ ಪರಿಸರ ಹಾಗೂ ಅದರ ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸುವ ತಮ್ಮ ಭರವಸೆಗಳನ್ನು ಭಾರತ ಸರಕಾರಕ್ಕೆ ನೆನಪಿಸಲು 250 ಜನರು -12 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಈ ಸರಕಾರ ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲು ಬಯಸುತ್ತದೆ. ಆದರೆ, ಭಾರತ ಲಡಾಖ್‌ ನ ಜನರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿರಾಕರಿಸಿದರೆ, ಅನಂತರ ಅದನ್ನು ಪ್ರಜಾಪ್ರಭುತ್ವದ ಮಲತಾಯಿ ಎಂದು ಕರೆಯಬಹುದು’’ ಎಂದು ಲಡಾಖ್ ಮೂಲದ ಎಂಜಿನಿಯರ್ ಹಾಗೂ ಶಿಕ್ಷಣತಜ್ಞ ಸೋನಮ್ ವಾಂಗ್ಚುಕ್ ಅವರು ಸೋಮವಾರ ‘ಎಕ್ಸ್’ನ ತನ್ನ ಪೋಸ್ಟ್ನಲ್ಲಿ ಬರೆದಿದ್ದಾರೆ.

‘‘ಲಡಾಖ್‌ ನ ಭೂಮಿ, ಪರಿಸರ ಹಾಗೂ ಸ್ಥಳೀಯ ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸಲು 250 ಜನರು -12 ಡಿಗ್ರಿ ಸೆಲ್ಲಿಯಸ್ ತಾಪಮಾನದಲ್ಲಿ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ದಕ್ಷಿಣದಲ್ಲಿ ಬೃಹತ್ ಭಾರತೀಯ ಕೈಗಾರಿಕೆ ಘಟಕಗಳು ಹಾಗೂ ಉತ್ತರದಲ್ಲಿ ಚೀನಾದ ಅತಿಕ್ರಮಣದಿಂದಾಗಿ ಬುಡಕಟ್ಟು ಜನರು ಪ್ರಮುಖ ಹುಲ್ಲುಗಾವಲನ್ನು ಕಳೆದುಕೊಳ್ಳುತ್ತಿದ್ದಾರೆ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲು ಗಡಿಗೆ 10 ಸಾವಿರ ಲಡಾಖಿ ಕುರುಬರು ಹಾಗೂ ರೈತರು ಶೀಘ್ರದಲ್ಲಿ ರ‍್ಯಾಲಿ ನಡೆಸಲಿದ್ದಾರೆ’’ ಎಂದು ಸೋನಮ್ ವಾಂಗ್ಚುಕ್ ‘ಎಕ್ಸ್’ನ ಇನ್ನೊಂದು ಪೋಸ್ಟ್ನಲ್ಲಿ ಹೇಳಿದ್ದಾರೆ.

ಮಾರ್ಚ್ 6ರಂದು ಲಡಾಖ್‌ ನ ಲೇಹ್ನಿಂದ ತಮ್ಮ ಪ್ರತಿಭಟನೆಯನ್ನು ಆರಂಭಿಸಿದ ಸೋನಮ್ ವಾಂಗ್ಚುಕ್, ಸಮುದ್ರ ಮಟ್ಟದಿಂದ 3,500 ಮೀಟರ್ ಎತ್ತರದಲ್ಲಿ ನೂರಾರು ಜನರನ್ನು ಉದ್ದೇಶಿಸಿ, ತಮ್ಮ ಪ್ರತಿಭಟನೆ ಪ್ರತಿ ಬಾರಿ 21 ದಿನಗಳ ಹಂತದಲ್ಲಿ ನಡೆಯಲಿದೆ ಎಂದು ಪ್ರಕಟಿಸಿದ್ದರು.

ಲೇಹ್ ನಲ್ಲಿ ಈ ತಿಂಗಳ ಆರಂಭದಲ್ಲಿ ತಮ್ಮ ಎರಡು ಬೇಡಿಕೆಗಳನ್ನು ಬಲವಾಗಿ ಮಂಡಿಸಿದ್ದ ಸೋನಮ್ ವಾಂಗ್ಚುಕ್, ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದದ ಅಡಿ ಸೇರ್ಪಡೆ ಮಾಡಬೇಕು ಹಾಗೂ ಲಡಾಖ್‌ ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದರು.

ಲಡಾಖ್‌ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಅನ್ನು ಸಂವಿಧಾನದ 6ನೇಯ ಪರಿಚ್ಛೇದದ ಅಡಿ ಸೇರ್ಪಡೆ ಮಾಡಬೇಕು, ಈ ಅತಿ ಎತ್ತರದ ಪ್ರದೇಶಕ್ಕೆ ಪ್ರತ್ಯೇಕ ಲೋಕಸೇವಾ ಆಯೋಗ ರಚಿಸಬೇಕು ಎಂಬ ಬೇಡಿಕೆಯನ್ನು ಲಡಾಖ್‌ ನ ನಾಯಕತ್ವ ಕೇಂದ್ರದ ಮುಂದಿರಿಸಿತ್ತು. ಆದರೆ, ಮಾತುಕತೆಗಳು ಅಪೂರ್ಣವಾಗಿ ಉಳಿದಿದ್ದವು. ಆದುದರಿಂದ ಸೋನಮ್ ವಾಂಗ್ಚುಕ್ ಅವರು ಅಮರಣಾಂತ ಉಪವಾಸ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News