ಪ್ರವಾಹ ವೀಕ್ಷಣೆ ವೇಳೆ ಪಕ್ಕದಲ್ಲೇ ಸಾಗಿದ ರೈಲು: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಆಂಧ್ರ ಸಿಎಂ

Update: 2024-09-06 06:28 GMT

Screengrab: X/@PTI_News

ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ವಿಜಯವಾಡದ ಬುಡಮೇರು ರೈಲ್ವೆ ಸೇತುವೆಯ ಮೇಲೆ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ನಡೆದುಕೊಂಡು ಹೋಗುತ್ತಿದ್ದಾಗ ರೈಲು ಅವರ ಪಕ್ಕದಲ್ಲೇ ಸಾಗಿದ್ದು,ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಡದ ಬುಡಮೇರು ರೈಲ್ವೆ ಸೇತುವೆಯನ್ನು ರೈಲ್ವೇ ಸಂಚಾರಕ್ಕಷ್ಟೇ ವಿನ್ಯಾಸಗೊಳಿಸಲಾಗಿತ್ತು. ಆ ಸೇತುವೆಯಲ್ಲಿ ಪಾದಚಾರಿಗಳಿಗೆ ತೆರಳಲು ಸ್ಥಳಾವಕಾಶವಿರಲಿಲ್ಲ. ನಾಯ್ಡು ಅವರು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ಹಳಿಯಲ್ಲಿ ಇದ್ದಕ್ಕಿದ್ದಂತೆ ರೈಲು ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ನಾಯ್ಡು ಅವರನ್ನು ಟ್ರ್ಯಾಕ್‌ನ ಬದಿಗೆ ಸರಿಸಿ ರಕ್ಷಣೆ ಮಾಡಿದ್ದಾರೆ.

ನಾಯ್ಡು ಅವರು ಕಳೆದ 5 ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದು, ಹಲವು ಬಾರಿ ಭದ್ರತಾ ಪ್ರೋಟೋಕಾಲ್‌ಗಳನ್ನು ನಿರ್ಲಕ್ಷಿಸಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವೀಕ್ಷಣೆಯನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ವ್ಯಾಪಕ ಹಾನಿಯನ್ನುಂಟು ಮಾಡಿದ್ದು, ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಈ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News