ನೀತಿ ಸಂಹಿತೆ ಉಲ್ಲಂಘನೆ: ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ಆಟಗಾರರಿಗೆ ದಂಡ
ಹೊಸದಿಲ್ಲಿ: ಮುಂಬೈ ಇಂಡಿಯನ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಲೀಗ್‍ನ ಎರಡನೇ ನಿಧಾನ ಗತಿಯ ಓವರ್ ಮಾಡಿದ ತಪ್ಪಿಗಾಗಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಇತರ ಎಲ್ಲ ಆಟಗಾರರಿಗೆ ವೈಯಕ್ತಿಕವಾಗಿ 6 ಲಕ್ಷ ಅಥವಾ ಅವರ ಪಂದ್ಯದ ಸಂಭಾವನೆಯ ಶೇಕಡ 25ರಷ್ಟು ದಂಡ ವಿಧಿಸಲಾಗಿದೆ. ಎಕಾನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಲ್ಕು ವಿಕೆಟ್‍ಗಳ ಸೋಲು ಅನುಭವಿಸಿತ್ತು.
"ಎಪ್ರಿಲ್ 30, 2024ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಟಾಟಾ ಇಂಡಿಯನ್ ಪ್ರಿಮಿಯರ್ ಲೀಗ್‍ನ 48ನೇ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ಹೇಳಿಕೆ ನೀಡಿದೆ.
ಈ ಸೀಸನ್‍ನಲ್ಲಿ ಇದು ತಂಡದ ಎರಡನೇ ಅಪರಾಧವಾಗಿದ್ದು, ಐಪಿಎಲ್ ನೀತಿಸಂಹಿತೆ ಅನ್ವಯ, ಕನಿಷ್ಠ ಓವರ್ ದರವನ್ನು ನಿರ್ವಹಿಸಬೇಕಾಗುತ್ತದೆ. ಈ ಅಪರಾಧಕ್ಕಾಗಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಹೇಳಿದೆ.
ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಆಡಿದ ಎಲ್ಲ ಇತರ 11 ಮಂದಿ ಆಟಗಾರರಿಗೆ 6 ಲಕ್ಷ ರೂಪಾಯಿ ಅಥವಾ ಪಂದ್ಯದ ಸಂಭಾವನೆಯ ಶೇಖಡ 25, ಯಾವುದು ಕಡಿಮೆಯೋ ಆ ಮೊತ್ತದ ದಂಡ ವಿಧಿಸಲಾಗಿದೆ ಎಂದು ಪ್ರಕಟಣೆ ವಿವರಿಸಿದೆ.
ಎಲ್‍ಎಸ್‍ಜಿ ತಂಡ 10 ಪಂದ್ಯಗಳ ಪೈಕಿ ಆರನೇ ಗೆಲುವು ಸಾಧಿಸಿ ಮೂರನೇ ಸ್ಥಾನಕ್ಕೇರಿದರೆ, 10 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಏಳನೇ ಸೋಲು ಕಂಡಿತು.