ಪುರಷತ್ವ ಪರೀಕ್ಷೆಯನ್ನು ರಕ್ತದ ಮಾದರಿಯ ಮೂಲಕ ನಡೆಸಿ, ಎರಡು-ಬೆರಳ ಪರೀಕ್ಷೆಯನ್ನು ರದ್ದುಪಡಿಸಿ: ಮದ್ರಾಸ್ ಹೈಕೋರ್ಟ್
ಚೆನ್ನೈ: ಆರೋಪಿಯೊಬ್ಬನ ರಕ್ತದ ಮಾದರಿಯನ್ನು ಬಳಸಿಕೊಂಡು ಪುರುಷತ್ವ ಪರೀಕ್ಷೆ ನಡೆಸುವ ಮಾದರಿ ವಿಧಾನವೊಂದನ್ನು ರೂಪಿಸುವಂತೆ ಮದ್ರಾಸ್ ಹೈಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ವಿಜ್ಞಾನ ಮುಂದುವರಿದಿದೆ ಹಾಗೂ ವೀರ್ಯದ ಮಾದರಿಗಳನ್ನು ಸಂಗ್ರಹಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅದೇ ವೇಳೆ, ಮಹಿಳೆಯರ ಕನ್ಯತ್ವ ಪರೀಕ್ಷೆಗೆ ಎರಡು ಬೆರಳ ಪರೀಕ್ಷೆ ನಡೆಸುವುದನ್ನು ನಿಲ್ಲಿಸಬೇಕು ಎಂಬುದಾಗಿಯೂ ನ್ಯಾಯಾಲಯ ಹೇಳಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ) ಮತ್ತು ಬಾಲ ನ್ಯಾಯ ಕಾಯ್ದೆಯ ಅನುಷ್ಠಾನದ ಮೇಲೆ ನಿಗಾ ಇಡುವುದಕ್ಕಾಗಿ ರಚಿಸಲಾಗಿರುವ ನ್ಯಾಯಮೂರ್ತಿಗಳಾದ ಎನ್. ಆನಂದ್ ವೆಂಕಟೇಶ್ ಮತ್ತು ಸುಂದರ್ ಮೋಹನ್ ಅವರನ್ನೊಳಗೊಂಡ ವಿಭಾಗಪೀಠವೊಂದು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಓರ್ವ ಅಪ್ರಾಪ್ತ ಬಾಲಕಿ ಮತ್ತು ಬಾಲಕನಿಗೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನೂ ಪೀಠ ನಡೆಸುತ್ತಿದೆ.
‘‘ಎರಡು-ಬೆರಳ ಪರೀಕ್ಷೆ ಮತ್ತು ಹಳೆಯ ಪುರುಷತ್ವ ಪರೀಕ್ಷಾ ವಿಧಾನವನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ಲೈಂಗಿಕ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ, 2023 ಜನವರಿ 1ರ ನಂತರದ ವೈದ್ಯಕೀಯ ವರದಿಗಳನ್ನು ಸಂಗ್ರಹಿಸಿ, ಯಾವುದೇ ವರದಿಯಲ್ಲಿ ಎರಡು-ಬೆರಳ ಪರೀಕ್ಷೆಯ ಉಲ್ಲೇಖವಿದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಇದರ ಹೊಣೆಯನ್ನು ವಿವಿಧ ವಲಯಗಳ ಐಜಿಪಿಗಳಿಗೆ ನೀಡುವಂತೆ ಪೊಲೀಸ್ ಮಹಾ ನಿರ್ದೇಶಕರು ಸೂಚನೆ ನೀಡಬೇಕು’’ ಎಂದು ನ್ಯಾಯಾಲಯ ಹೇಳಿದೆ.
‘‘ಅದೇ ರೀತಿ, ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪುರುಷತ್ವ ಪರೀಕ್ಷೆ ನಡೆಸಲು ಆರೋಪಿಯಿಂದ ವೀರ್ಯವನ್ನು ಪಡೆಯುವ ವ್ಯವಸ್ಥೆಯಿದೆ. ಇದು ಹಿಂದಿನ ವ್ಯವಸ್ಥೆಯಾಗಿದೆ. ವಿಜ್ಞಾನ ಮುಂದುವರಿದಿದೆ. ಈಗ ಈ ಪರೀಕ್ಷೆಯನ್ನು ರಕ್ತದ ಮಾದರಿಗಳ ಮೂಲಕ ನಡೆಸಲು ಸಾಧ್ಯವಿದೆ’’ ಎಂದು ನ್ಯಾಯಾಲಯ ಹೇಳಿತು.