ಚುನಾವಣಾ ಆಯೋಗವನ್ನು ಭೇಟಿಯಾದ ಕಾಂಗ್ರೆಸ್ ನಿಯೋಗ | ಹರ್ಯಾಣದ 20 ಕ್ಷೇತ್ರಗಳ ಇವಿಎಂ ಸೀಲ್ ಮಾಡಲು ಆಗ್ರಹ

Update: 2024-10-10 07:32 GMT

Screengrab:X/@INCIndia/X

ಹೊಸದಿಲ್ಲಿ : ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್, ಪವನ್ ಖೇರಾ ಮತ್ತು ಅಜಯ್ ಮಾಕನ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ನಿಯೋಗವು ಬುಧವಾರ ಚುನಾವಣಾ ಆಯೋಗವನ್ನು ಭೇಟಿಯಾಗಿ ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿತು.

ಹರ್ಯಾಣದಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಹಲವಾರು ಕ್ಷೇತ್ರಗಳಲ್ಲಿ ಮತಎಣಿಕೆ ಪ್ರಕ್ರಿಯೆ ಕುರಿತು ಹಲವಾರು ಕಾಂಗ್ರೆಸ್ ನಾಯಕರು ಶಂಕೆಗಳನ್ನು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖೇರಾ, ‘ಪಕ್ಷವು ತಾನು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿರುವ ಮತದಾನ ಯಂತ್ರಗಳನ್ನು ಸೀಲ್ ಮಾಡುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದೆ. ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ದೂರುಗಳನ್ನು ನಾವು ಸಲ್ಲಿಸಲಿದ್ದೇವೆ. 20 ವಿಧಾನಸಭಾ ಕ್ಷೇತ್ರಗಳಲ್ಲಿ ಆರೋಪಿತ ಅಕ್ರಮಗಳಿಗೆ ಸಂಬಂಧಿಸಿದಂತೆ ನಾವು ದಾಖಲೆಗಳನ್ನು ಒಪ್ಪಿಸಿದ್ದೇವೆ ಮತ್ತು ಮಾಧ್ಯಮಗಳಿಗೆ ಈ ದಾಖಲೆಗಳನ್ನು ಬಿಡುಗಡೆಗೊಳಿಸಲು ಯೋಜಿಸಿದ್ದೇವೆ ’ ಎಂದು ತಿಳಿಸಿದರು.

ಇನ್ನೂ 13 ಕ್ಷೇತ್ರಗಳಿದ್ದು,ಚುನಾವಣಾ ಆಯೋಗಕ್ಕೆ ಸಲ್ಲಿಸಲು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದ ಅವರು, ಪಕ್ಷವು ತನ್ನ ಬೇಡಿಕೆಗಳಿಗೆ ಆಯೋಗದ ಉತ್ತರಕ್ಕಾಗಿ ಕಾಯುತ್ತಿದೆ ಎಂದು ಹೇಳಿದರು.

ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರವನ್ನು ಬರೆದಿದ್ದ ಚುನಾವಣಾ ಆಯೋಗವು, ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ‘ಅನಿರೀಕ್ಷಿತ’ ಎಂದು ಬಣ್ಣಿಸಿದ್ದ ಮತ್ತು ಆ ಬಗ್ಗೆ ವಿಶ್ಲೇಷಣೆಯನ್ನು ಪ್ರಸ್ತಾವಿಸಿದ್ದ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ತಾನು ಗಮನಿಸಿದ್ದೇನೆ ಎಂದು ತಿಳಿಸಿತ್ತು ಮತ್ತು ಕಾಂಗ್ರೆಸ್ ನಿಯೋಗಕ್ಕೆ ಸಂಜೆ ಆರು ಗಂಟೆಗೆ ಭೇಟಿಗೆ ಸಮಯಾವಕಾಶವನ್ನು ನೀಡಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News