ಲೋಕಸಭಾ ಚುನಾವಣೆ: ಪ್ರಚಾರಕ್ಕೆ ಹಣವಿಲ್ಲ, ಪಕ್ಷದಿಂದ ಫಂಡ್‌ ದೊರೆತಿಲ್ಲ ಎಂದು ಹೇಳಿ ಟಿಕೆಟ್‌ ವಾಪಸ್‌ ನೀಡಿದ ಕಾಂಗ್ರೆಸ್‌ ಅಭ್ಯರ್ಥಿ

Update: 2024-05-04 07:52 GMT

ಸುಚರಿತಾ ಮೊಹಂತಿ (Photo:X/Sucharita4Puri)

ಹೊಸದಿಲ್ಲಿ: ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಪಡೆದಿದ್ದ ಸುಚರಿತಾ ಮೊಹಂತಿ, ತಮ್ಮ ಬಳಿ ಪ್ರಚಾರಕ್ಕಾಗಿ ಸಾಕಷ್ಟು ಹಣವಿಲ್ಲವೆಂದು ತಮ್ಮ ಟಿಕೆಟ್‌ ಅನ್ನು ಪಕ್ಷಕ್ಕೆ ವಾಪಸ್‌ ನೀಡಿದ್ದಾರೆ. ಸಾರ್ವಜನಿಕ ನಿಧಿ ಸಂಗ್ರಹ ಮತ್ತು ಕನಿಷ್ಠ ಖರ್ಚುಮಾಡುವಿಕೆ ಅನುಸರಿಸಿಯೂ ಆರ್ಥಿಕ ಸಮಸ್ಯೆಯಿಂದ ಪರಿಣಾಮಕಾರಿ ಪ್ರಚಾರ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

“ನನಗೆ ಪಕ್ಷದಿಂದ ನಿಧಿ ನಿರಾಕರಿಸಲಾಯಿತು. ಕೆಲ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ಬಿಜೆಪಿ ಮತ್ತು ಬಿಜೆಡಿ ಹಣದ ರಾಶಿಯಲ್ಲಿ ಕುಳಿತಿವೆ. ಎಲ್ಲೆಡೆ ಸಂಪತ್ತಿನ ವಿಪರೀತ ಪ್ರದರ್ಶನವಾಗುತ್ತಿದೆ. ಆ ರೀತಿ ಸ್ಪರ್ಧಿಸುವುದು ನನಗೆ ಬೇಕಿಲ್ಲ,” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಅವರಿಗೆ ಬರೆದ ಪತ್ರದಲ್ಲಿ ಮೊಹಂತಿ ವಿವರಿಸಿದ್ದಾರೆ.

“ಜನ ಕೇಂದ್ರಿತ ಪ್ರಚಾರ ನಡೆಸುವುದು ನನಗೆ ಬೇಕಿದೆ. ಆದರೆ ಹಣಕಾಸಿನ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಪಕ್ಷವೂ ಇದಕ್ಕೆ ಕಾರಣವಲ್ಲ. ಬಿಜೆಪಿ ಸರ್ಕಾರ ಪಕ್ಷವನ್ನು ಕಷ್ಟದಲ್ಲಿ ದೂಡಿದೆ. ಖರ್ಚು ಮಾಡುವಿಕೆಗೆ ಬಹಳಷ್ಟು ನಿಯಂತ್ರಣಗಳಿವೆ,” ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಅಜೊಯ್‌ ಕುಮಾರ್‌ ತಮಗೆ ತಮ್ಮ ಖರ್ಚು ನೋಡಿಕೊಳ್ಳುವಂತೆ ಹೇಳಿದ್ದರು ಎಂದೂ ಆಕೆ ಹೇಳಿದ್ದಾರೆ.

“ವೃತ್ತಿಪರ ಪತ್ರಕರ್ತೆಯಾಗಿದ್ದ ನಾನು 10 ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸಿದ್ದೆ. ಪ್ರಚಾರಕ್ಕಾಗಿ ಹಣಕಾಸಿನ ಕೊರತೆ ಕುರಿತು ಪಕ್ಷದ ಕೇಂದ್ರ ನಾಯಕತ್ವವನ್ನೂ ಸಂಪರ್ಕಿಸಿದ್ದೆ. ಪುರಿಯಲ್ಲಿ ವಿಜಯಕ್ಕೆ ದಾರಿ ಮಾಡಿಕೊಡಬಹುದಾದ ಪ್ರಚಾರಕ್ಕಾಗಿ ಹಣಕಾಸಿನ ಕೊರತೆಯಿದೆ. ಪಕ್ಷದ ಸಹಾಯವಿಲ್ಲದೆ ಪ್ರಚಾರ ಸಾಧ್ಯವಿಲ್ಲ, ಈ ಕಾರಣ ಟಿಕೆಟ್‌ ವಾಪಸ್‌ ನೀಡುತ್ತಿದ್ದೇನೆ,” ಎಂದು ಅವರು ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ 1952ರಿಂದ ಕಾಂಗ್ರೆಸ್‌, ಬಿಜೆಡಿ ಪ್ರಾಬಲ್ಯವಿದೆ. 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಡಿಯ ಪಿನಕಿ ಮಿಶ್ರ 538321 ಮತಗಳನ್ನು ಪಡೆದು ಗೆದ್ದಿದ್ದರೆ, ಬಿಜೆಪಿಯ ಸಂಬಿತ್‌ ಪಾತ್ರ 526607 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಸುಚರಿತ ಮೊಹಂತಿ 2,89,800 ಮತಗಳನ್ನು ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News