INDIA ಮೈತ್ರಿಕೂಟದ ಬಗ್ಗೆ ಕಠಿಣವಾಗಿ ಮಾತನಾಡಿದ ಅಖಿಲೇಶ್ ಯಾದವ್: ಮರುಚಿಂತನೆ ಮಾಡುವ ಸುಳಿವು

Update: 2023-10-19 16:58 GMT

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ವಿರುದ್ಧ ಇಂದು ನೇರವಾಗಿ ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅವರು ಇತರೆ ಪಕ್ಷಗಳನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಈ ಮೈತ್ರಿಯಿಂದ ಲಾಭವಿಲ್ಲ ಎಂಬ ಸುಳಿವು ನೀಡಿರುವ ಅವರು, INDIA ಮೈತ್ರಿಕೂಟದ ಬಗ್ಗೆ ಮುಕ್ತವಾಗಿದ್ದೇವೆ ಎಂದೂ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸುವ ಕುರಿತು ತಮ್ಮ ಪಕ್ಷವು ಮರುಚಿಂತನೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಮಧ್ಯಪ್ರದೇಶ ಚುನಾವಣೆಯಲ್ಲಿ ಪರಸ್ಪರ ಎದುರಾಗಿ 18 ಅಭ್ಯರ್ಥಿಗಳನ್ನು ಇಳಿಸುವ ಮೂಲಕ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ರಾಷ್ಟ್ರಮಟ್ಟದ ಮೈತ್ರಿಯು ಅಂತ್ಯಗೊಂಡಿದೆ. ಈ ಬೆಳವಣಿಗೆಯಿಂದ ಬಿಜೆಪಿ ವಿರೋಧಿ ಮತಗಳು ಇಬ್ಭಾಗವಾಗಿ, ಮುಂಬರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, “ನಾವು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ (ಅವರೀಗ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದಾರೆ) ಅವರೊಂದಿಗೆ ಮಾತನಾಡಿದ್ದೇವೆ. ಅವರು ಪಕ್ಷದ ಪ್ರದರ್ಶನದ ಕುರಿತು ಚರ್ಚಿಸಿದರು. ನಾವು ನಮ್ಮ ಶಾಸಕರು ಈ ಹಿಂದೆ ಯಾವ ಯಾವ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು ಎಂದು ತಿಳಿಸಿದೆವು. ಇದರೊಂದಿಗೆ ನಾವು ಯಾವ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿದ್ದೆವು ಎಂಬುದರ ಕುರಿತೂ ಮಾಹಿತಿ ನೀಡಿದೆವು” ಎಂದು ಹೇಳಿದ್ದಾರೆ.

ಈ ಚರ್ಚೆಯು ಮಧ್ಯರಾತ್ರಿ 1 ಗಂಟೆಯವರೆಗೂ ಜರುಗಿತು ಎಂದೂ ಅವರು ತಿಳಿಸಿದ್ದಾರೆ.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ್ದ ಕಮಲ್ ನಾಥ್, “ರಾಜ್ಯ ಮಟ್ಟದ ಮೈತ್ರಿ ಕುರಿತು ಸಮಾಜವಾದಿ ಪಕ್ಷದೊಂದಿಗೆ ಈಗಲೂ ಮಾತುಕತೆಗಳು ಮುಂದುವರಿದಿವೆ. ಈ ಮಾತುಕತೆಗಳಲ್ಲಿ ಪ್ರಾಯೋಗಿಕ ತೊಡಕುಗಳೂ ಇವೆ. ಸಮಾಜವಾದಿ ಪಕ್ಷವು ನಮ್ಮ ಪಕ್ಷದ ಚಿಹ್ನೆಯಡಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧವಿದ್ದರೂ, ನಮ್ಮ ಪಕ್ಷದ ಅಭ್ಯರ್ಥಿಗಳು ಸಮಾಜವಾದಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಸಿದ್ಧರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡಲು ಸಾಧ್ಯ? ತಳಮಟ್ಟದಲ್ಲಿ ಪ್ರಾಯೋಗಿಕ ಸಮಸ್ಯೆಗಳಿವೆ” ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಬಿಜೆಪಿಯನ್ನು ಪರಾಭವಗೊಳಿಸಬೇಕು ಎಂಬ ಅಖಿಲೇಶ್ ಯಾದವ್ ರ ನಿಲುವೇ ಕಾಂಗ್ರೆಸ್ ಪಕ್ಷದ್ದೂ ಆಗಿದೆ ಎಂದು ಅವರು ಹೇಳಿದ್ದಾರೆ.

“ಬಿಜೆಪಿಯನ್ನು ಪರಾಭವಗೊಳಿಸಲು ಸಮಾಜವಾದಿ ಪಕ್ಷವು ನಮಗೆ ನೆರವು ನೀಡಬೇಕು ಎಂದು ನಾವು ಬಯಸುತ್ತೇವೆ. ಬಿಜೆಪಿಯನ್ನು ಪರಾಭವಗೊಳಿಸುವ ಗುರಿ ಹೊಂದಿರುವ ಅಖಿಲೇಶ್ ಯಾದವ್ ಗೆ ಧನ್ಯವಾದ ತಿಳಿಸುತ್ತೇನೆ. ಅವರು ಈ ಮಾತನ್ನು ನನಗೆ ವೈಯಕ್ತಿಕವಾಗಿ ಹೇಳಿದ್ದಾರೆ” ಎಂದು ಕಮಲ್ ನಾಥ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News