ಸೇನೆಗೆ ಆಯ್ಕೆಯಾದರೂ ನೇಮಕಗೊಳ್ಳದ 1.5 ಲಕ್ಷ ಮಂದಿಗೆ ಪರಿಹಾರಕ್ಕಾಗಿ ಕಾಂಗ್ರೆಸ್ ಹೋರಾಟ : ರಾಹುಲ್

Update: 2024-02-11 16:50 GMT

 ರಾಹುಲ್ ಗಾಂಧಿ | Photo: PTI  

ರಾಯ್ಪುರ: ಭಾರತೀಯ ಸೇನೆಗೆ ಆಯ್ಕೆಯಾದ, ಆದರೆ ನೇಮಕಗೊಳ್ಳದ 1.5 ಲಕ್ಷ ಮಂದಿಯ ಪರವಾಗಿ ಕಾಂಗ್ರೆಸ್ ಪಕ್ಷವು ಹೋರಾಡಲಿದೆ ಎಂದು ಸಂಸದ ರಾಹುಲ್ ಗಾಂಧಿ ರವಿವಾರ ಘೋಷಿಸಿದ್ದು, ಒಂದೋ ಅವರಿಗೆ ಪರಿಹಾರ ದೊರೆಯಬೇಕು ಇಲ್ಲವೇ ಸೇನೆಗೆ ನೇಮಕಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಎರಡು ದಿನಗಳ ಬಿಡುವಿನ ಬಳಿಕ ಚತ್ತೀಸ್ ಗಡದ ರಾಯಗಢ ಜಿಲ್ಲೆಯಲ್ಲಿ ಪುನಾರಂಭಗೊಂಡ ಭಾರತ ಜೋಡೋ ನ್ಯಾಯ ಯಾತರಾದ ಭಾಗವಾಗಿ ನಡೆದ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಭಾಷಣ ಆರಂಭಿಸುವ ಮೊದಲು ಕೆಲವು ಮಕ್ಕಳನ್ನು ತನ್ನ ಸುತ್ತ ಕುಳಿತುಕೊಳ್ಳುವಂತೆ ಹೇಳಿದ ರಾಹುಲ್, ಭವಿಷ್ಯದಲ್ಲಿ ನೀವು ಏನಾಗಲು ಬಯಸುವಿರಿ ಎಂದು ಅವರರನ್ನು ಪ್ರಶ್ನಿಸಿದರು. ಮಕ್ಕಳಲ್ಲೊಬ್ಬಾತ ತಾನು ಸೇನೆಗೆ ಸೇರಲು ಬಯಸುವುದಾಗಿ ಹೇಳಿದಾಗ, ಅಗ್ನಿವೀರ್ ಎಂದರೆ ಏನು ಗೊತ್ತೇ ಎಂದು ಪುಟಾಣಿಯನ್ನು ಪ್ರಶ್ನಿಸಿದರು ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಅಲ್ಪಾವಧಿಯ ಸೇನಾನೇಮಕಾತಿ ಯೋಜನೆ ‘ಅಗ್ನಿವೀರ್’ ಬಗ್ಗೆ ನೆರೆದಿದ್ದ ಜನರಿಗೆ ವಿವರಿಸಿದರು.

‘‘ಈ ಮೊದಲು ನಿಮ್ಮಂತಹ ಮಕ್ಕಳು ಸೇನೆಗೆ ಸೇರುವ ಹಂಬಲ ಹೊಂದಿದ್ದರು.ಅಲ್ಲದೆ ಆಯ್ಕೆ ಕೂಡಾ ಆಗಿದ್ದರು. ಆದರೆ ಈಗ ಬಿಜೆಪಿಯು ಅಗ್ನಿವೀರ್ ಯೋಜನೆಯನ್ನು ಜಾರಿಗೆ ತಂದಿದ್ದು, ಯುವಜನರನ್ನು ನಾಲ್ಕು ವರ್ಷಗಳ ಅವಧಿಗೆ ಮಾತ್ರವೇ ಸೇನೆಗೆ ಸೇರಿಸಿಕೊಳ್ಳುತ್ತಿದೆ. ನಾಲ್ಕು ವರ್ಷಗಳ ಬಳಿಕ ಅವರನ್ನು ಮನೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಅಗ್ವಿವೀರನು ಚೀನಾ ಗಡಿಯಲ್ಲಿ ವೀರಮರಣವನ್ನಪ್ಪಿದಲ್ಲಿ, ಆತನಿಗೆ ಹುತಾತ್ಮ ಸ್ಥಾನವೂ ಸಿಗದು” ಎಂದವರು ಹೇಳಿದ್ದಾರೆ.

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸೇನೆಗೆ ಆಯ್ಕೆಯಾದ 1.5 ಲಕ್ಷ ಮಂದಿ ನೇಮಕಗೊಂಡಿಲ್ಲ ಮತ್ತು ಅವರು ದೇಶದ ಸುತ್ತಲೂ ಅಲೆದಾಡುತ್ತಿದ್ದಾರೆ. ಯುವಜನರ ದೇಶಭಕ್ತಿ ಭಾವನೆಗಳ ಬಗ್ಗೆ ಬಿಜೆಪಿಗೆ ಯಾವುದೇ ಆಸಕ್ತಿಯಿಲ್ಲ. ಈ ಯುವಜನರು ನನ್ನನ್ನು ಭೇಟಿಯಾಗಿ ನನ್ನ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆಗ ನಾನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅವರಿಗೆ ಪರಿಹಾರ ದೊರಕಿಸಿಕೊಡುವ ಇಲ್ಲವೇ ನೇಮಕಗೊಳಿಸುವ ಭರವಸೆ ನೀಡಿದ್ದೇನೆ.

2019ರಿಂದ 2021ರ ನಡುವಿನ ಅವಧಿಯಲ್ಲಿ ಸುಮಾರು 1.5 ಲಕ್ಷ ಮಂದಿ ಯುವಜನರು ಸೇನೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದರು. ಆದರೆ ಕೇಂದ್ರ ಸರಕಾರವು ಹಠಾತ್ತನೇ ಅಗ್ನಿವೀರ್ ಯೋಜನೆಯನ್ನು ಪರಿಚಯಿಸಿದ ಬಳಿಕ ಇವರಿಗೆ ನೇಮಕಾತಿಯನ್ನು ನಿರಾಕರಿಸಿತು ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆಂದು ಹೇಳಿದರು.

‘‘ಸೇನೆಯ ಎಲ್ಲಾ ಗುತ್ತಿಗೆಗಳು ಅದಾನಿ ಗುಂಪಿಗೆ ಹೋಗುತ್ತಿವೆ. ಹೆಲಿಕಾಪ್ಟರ್ ಗಳು, ಫಿರಂಗಿಗಳು, ಕಾಡತೂಸುಗಳು, ರೈಫಲ್ ಗಳು ಹಾಗೂ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಆದಾನಿ ಕಂಪೆನಿಗಳು ಖರೀದಿಸುತ್ತವೆ. ಡ್ರೋನ್ ಗಳು ಹಾಗೂ ರೈಫಲ್ ಗಳನ್ನು ಭಾರತದಲ್ಲಿ ನಿರ್ಮಿಸುವ ಗುತ್ತಿಗೆಗಳು ಕೂಡಾ ಆದಾನಿ ಕಂಪೆನಿಯ ಪಾಲಾಗುತ್ತಿದೆ. ದೇಶದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ರೈಫಲ್ಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಈಗ ಅದರ ಗುತ್ತಿಯನ್ನು ಕಸಿದು, ಆದಾನಿಗೆ ನೀಡಲಾಗಿದೆ’’

- ರಾಹುಲ್ ಗಾಂಧಿ, ಸಂಸದ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News