ಅದಾನಿ ಹಗರಣದ ಬಗ್ಗೆ ಜಂಟಿ ಸಮಿತಿ ತನಿಖೆ ಘೋಷಣೆಗೆ ಕಾಂಗ್ರೆಸ್ ಒತ್ತಾಯ
ಹೊಸದಿಲ್ಲಿ: ಅದಾನಿ ಹಗರಣವನ್ನು ಬುಧವಾರ ಮತ್ತೆ ಪ್ರಸ್ತಾಪಿಸಿದ ಕಾಂಗ್ರೆಸ್, ಅದಾನಿ ಗುಂಪು ಎದುರಿಸುತ್ತಿರುವ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಯನ್ನು ನೂತನ ಸಂಸತ್ ನಲ್ಲಿ ಘೋಷಿಸುವ ಮೂಲಕ ಸಂಸತ್ ಹೊಸ ಅಧ್ಯಾಯವೊಂದನ್ನು ಆರಂಭಿಸಬಹುದು ಎಂದು ಹೇಳಿದೆ.
ಸಂಸತ್ತಿನ ವಿಶೇಷ ಅಧಿವೇಶನವು ಸೆಪ್ಟಂಬರ್ 18ರಿಂದ 22ರವರೆಗೆ ನಡೆಯಲಿರುವುದು. ಅಧಿವೇಶನವು ಸೆಪ್ಟಂಬರ್ 18ರಂದು ಹಳೆಯ ಸಂಸತ್ ಕಟ್ಟಡದಲ್ಲಿ ಆರಂಭಗೊಳ್ಳುವುದು ಹಾಗೂ ಸೆಪ್ಟಂಬರ್ 19ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕಲಾಪಗಳು ನೂತನ ಕಟ್ಟಡಕ್ಕೆ ವರ್ಗಾವಣೆಗೊಳ್ಳುವ ನಿರೀಕ್ಷೆಯಿದೆ.
ಹೂಡಿಕೆದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಅದಾನಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಮಾಜಿ ಅದಾನಿ ಗುತ್ತಿಗೆದಾರರೊಬ್ಬರು ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ‘‘ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ.
ಅದರಲ್ಲಿ ಅದಾನಿಯ ಬೃಹತ್ ಹಗರಣದ ಬಗ್ಗೆ ತನಿಖೆ ನಡೆಸುವಲ್ಲಿ ಸೆಬಿ ಹೇಗೆ ವಿಫಲವಾಗಿದೆ ಎನ್ನುವುದನ್ನು ವಿವರವಾಗಿ ತಿಳಿಸಲಾಗಿದೆ’’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ (ಹಿಂದಿನ ಟ್ವಿಟರ್)ನಲ್ಲಿ ಬರೆದಿದ್ದಾರೆ. ತನಗೆ ಒಳಗಿನ ಮಾಹಿತಿ ಗೊತ್ತು ಎಂದು ಹೇಳುವ ಮಾಜಿ ಅದಾನಿ ಗುತ್ತಿಗೆದಾರರೊಬ್ಬರು, ಕೋಟಿಗಟ್ಟಲೆ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಅದಾನಿ ಹಗರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಮಧ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟನ್ನು ಕೋರಿದ್ದಾರೆ.
‘‘ಈ ಎಲ್ಲಾ ಅಂಶಗಳು ಜೆಪಿಸಿ ತನಿಖೆಯ ಅಗತ್ಯವನ್ನು ಬಲವಾಗಿ ಸಾರುತ್ತಿವೆ. ಪ್ರಧಾನಿಗೆ ನಿಜವಾಗಿಯೂ ಅಡಗಿಸಲು ಏನೂ ಇಲ್ಲದಿದ್ದರೆ, ಹೊಸ ಸಂಸತ್ ಕಟ್ಟಡದಲ್ಲಿ ಜೆಪಿಸಿ ತನಿಖೆಯನ್ನು ಘೋಷಿಸುವ ಮೂಲಕ ಹೊಸ ಕಟ್ಟಡದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಬಹುದಾಗಿದೆ’’ ಎಂದು ಜೈರಾಮ್ ರಮೇಶ್ ಹೇಳಿದರು.
ಅದಾನಿ ಗುಂಪಿಗೆ ಸೇರಿದ ಕಂಪೆನಿಗಳು ಲೆಕ್ಕಪತ್ರಗಳಲ್ಲಿ ವಂಚಿಸುತ್ತಿವೆ, ಶೇರುಗಳ ಬೆಲೆಗಳನ್ನು ಕೃತಕವಾಗಿ ಏರಿಸುತ್ತಿವೆ ಹಾಗೂ ತೆರಿಗೆ ತಪ್ಪಿಸಲು ಮತ್ತು ಹಣದ ಮೂಲವನ್ನು ಮರೆಮಾಚಲು ತೆರಿಗೆಯಿಲ್ಲದ ದೇಶಗಳನ್ನು ಅನುಚಿತವಾಗಿ ಬಳಸಿಕೊಳ್ಳುತ್ತಿವೆ ಎಂಬುದಾಗಿ ಅಮೆರಿಕದ ವ್ಯಾಪಾರ ಕಂಪೆನಿ ಹಿಂಡನ್ ಬರ್ಗ್ ರಿಸರ್ಚ್ ಜನವರಿ 24ರಂದು ಬಿಡುಗಡೆಗೊಳಿಸಿದ ವರದಿಯೊಂದರಲ್ಲಿ ಆರೋಪಿಸಿತ್ತು.