ಒಆರ್ ಒಪಿ ಜಾರಿಯಲ್ಲಿ ಅಸಮಂಜಸತೆಗಳ ಕುರಿತು ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Update: 2023-09-16 16:51 GMT

ರೋಹಿತ್ ಚೌಧರಿ | Photo: PTI 

ಹೊಸದಿಲ್ಲಿ: ‘ಸಮಾನ ಶ್ರೇಣಿ ಸಮಾನ ಪಿಂಚಣಿ (ಒಆರ್ ಒಪಿ)’ ಯನ್ನು ಜಾರಿಗೊಳಿಸುತ್ತಿರುವ ರೀತಿಯ ಬಗ್ಗೆ ಶನಿವಾರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಯುಪಿಎ ಆಡಳಿತಾವಧಿಯಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಗೆ ಅನುಗುಣವಾಗಿ ಅದನ್ನು ಮಾಡಿದ್ದರೆ ‘ದೊಡ್ಡ ಪ್ರಮಾಣದಲ್ಲಿ ಅಸಮಂಜಸತೆಗಳು’ ಇರುತ್ತಿರಲಿಲ್ಲ ಎಂದು ಹೇಳಿದೆ.

ಭಾರತ ಜೋಡೊ ಯಾತ್ರೆಯ ಮುಂದುವರಿದ ಭಾಗವಾಗಿ ತನ್ನ ಲಡಾಖ್ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾಜಿ ಯೋಧರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ, ಒಆರ್ ಒಪಿ ಯನ್ನು ಹೇಗೆ ತಪ್ಪಾಗಿ ಜಾರಿಗೊಳಿಸಲಾಗುತ್ತಿದೆ ಮತ್ತು ಅಗ್ನಿಪಥ ಯೋಜನೆಯು ಹೇಗೆ ದೇಶದ ಸುರಕ್ಷತೆ ಮತ್ತು ಸಮಗ್ರತೆಗೆ ಹಾನಿಯನ್ನುಂಟು ಮಾಡುತ್ತಿದೆ ಎನ್ನುವುದನ್ನು ಮಾಜಿ ಯೋಧರು ರಾಹುಲ್ ಗಾಂಧಿಯವರಿಗೆ ತಿಳಿಸಿದ್ದರು. ಅಗ್ನಿಪಥ ಯೋಜನೆಯು ಯುವಜನರ ಭವಿಷ್ಯವನ್ನೂ ನಾಶಗೊಳಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು ಎಂದು ಕಾಂಗ್ರೆಸಿನ ಮಾಜಿ ಯೋಧರ ವಿಭಾಗದ ಮುಖ್ಯಸ್ಥ ಕರ್ನಲ್ (ನಿವೃತ್ತ) ರೋಹಿತ್ ಚೌಧರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಲ್ಲ ನಿವೃತ್ತ ಯೋಧರಿಗೆ (ಅಧಿಕಾರಿಗಳು,ಜೆಸಿಒಗಳು ಮತ್ತು ಇತರ ಶ್ರೇಣಿಗಳು) ಸಮಾನವಾಗಿ ಅನ್ವಯಗೊಳ್ಳುವ ಒಆರ್ ಒಪಿ ಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದ 2014, ಫೆ.26ರ ಯುಪಿಎ ಸರಕಾರದ ಆದೇಶಕ್ಕೆ ಅನುಗುಣವಾಗಿ ಜಾರಿಗೊಳಿಸಲಾಗಿಲ್ಲ ಎನ್ನುವುದನ್ನು ರಾಹುಲ್ ಗಾಂಧಿಯವರು ನಿವೃತ್ತ ರಕ್ಷಣಾ ಪಡೆಗಳ ಸಿಬ್ಬಂದಿಗಳೊಂದಿಗೆ ನಡೆಸಿದ್ದ ಸಂವಾದವು ಎತ್ತಿ ತೋರಿಸಿದೆ ಎಂದು ತಿಳಿಸಿರುವ ಚೌಧರಿ , ಒಆರ್ ಒಪಿ -1 ಮತ್ತು ಒಆರ್ ಒಪಿ -2ರ ಪ್ರಸ್ತುತ ರೂಪ ವಾಸ್ತವದಲ್ಲಿ ಯುಪಿಎ ಆಡಳಿತದ ಪರಿಕಲ್ಪನೆಯ ಒಆರ್ ಒಪಿ ಅಲ್ಲ, ಅದು ‘ಒಂದು ಶ್ರೇಣಿ ಮತ್ತು ಹಲವು ವ್ಯಕ್ತಿಗಳು’ ಆಗಿದೆ ಎಂದಿದ್ದಾರೆ.

ಯುಪಿಎ ಅಧಿಸೂಚನೆಯಂತೆ ಅಕ್ಷರಶಃ ಒಆರ್ ಒಪಿ ಯನ್ನು ಜಾರಿಗೊಳಿಸಿದ್ದರೆ ದೊಡ್ಡ ಪ್ರಮಾಣದಲ್ಲಿ ಅಸಮಂಜಸತೆಗಳು ನುಸುಳಿಕೊಳ್ಳುತ್ತಿರಲಿಲ್ಲ. 2022,ಡಿ.23ರಂದು ಒಆರ್ ಒಪಿ -2ರ ಜಾರಿಗೆ ಆದೇಶಿಸುವಾಗ ಭಾರತ ಜೋಡೊ ಯಾತ್ರೆಯು ದಿಲ್ಲಿಯನ್ನು ಪ್ರವೇಶಿಸಲಿರುವ ನಿರಂತರ ಒತ್ತಡದಲ್ಲಿದ್ದ ನರೇಂದ್ರ ಮೋದಿ ಸರಕಾರವು ಜೆಸಿಒಗಳು ಮತ್ತು ಇತರ ಶ್ರೇಣಿಗಳ ಮಾಸಿಕ ಪಿಂಚಣಿಗಳನ್ನು ಕೆಲವು ಸಾವಿರ ರೂ.ಗಳಷ್ಟು ತಗ್ಗಿಸುವ ಮೂಲಕ ಇನ್ನಷ್ಟು ಅಸಮಂಜಸತೆಗಳಿಗೆ ಕಾರಣವಾಗಿದೆ ಎಂದಿರುವ ಅವರು, ಯಾವುದೇ ವಿಳಂಬವನ್ನು ಮಾಡದೇ ಒಆರ್ ಒಪಿ ಅಸಮಂಜಸತೆಗಳನ್ನು ನಿವಾರಿಸಬೇಕು ಎಂದು ಮೋದಿ ಸರಕಾರವನ್ನು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News