ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದೆ ಎಂದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್
Congress leader Digvijay Singh said that it is possible that the EVMs were hacked in the election
ಹೊಸದಿಲ್ಲಿ: ಮಧ್ಯಪ್ರದೇಶ,ರಾಜಸ್ತಾನ, ಚತ್ತೀಸ್‌ಗಡ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ದಯನೀಯ ಸೋಲು ಅನುಭವಿಸಿದ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಇಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ಸಾಚಾತನದ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಹಾಲಿ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದೆದೆಯೆಂದು ಅವರು ಹೇಳಿದ್ದಾರೆ.
‘‘ಚಿಪ್ ಹೊಂದಿರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದಾಗಿದೆ’’ ಎಂದು ಸಿಂಗ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 2003ರಿಂದಲೂ ನಾವು ಇವಿಎಂಗಳ ಮೂಲಕ ಮತದಾನ ನಡೆಸುವುದನ್ನು ನಾನು ವಿರೋಧಿಸಿದ್ದೇನೆ. ವೃತ್ತಿಪರ ಹ್ಯಾಕರ್‌ಗಳ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ನಿಯಂತ್ರಿಸಲು ನಾವು ಅವಕಾಶ ನೀಡಬೇಕೇ?. ಎಲ್ಲಾ ರಾಜಕೀಯ ಪಕ್ಷಗಳು ಸ್ಪಂದಿಸಬೇಕಾದಂತಹ ಮೂಲಭೂತ ಪ್ರಶ್ನೆ ಇದಾಗಿದೆ. ಮಾನ್ಯ ಚುನಾವಣಾ ಆಯೋಗ ಹಾಗೂ ಗೌರವಾನ್ವಿತ ಸುಪ್ರೀಂಕೋರ್ಟ್ ನಮ್ಮ ಭಾರತೀಯ ಪ್ರಜಾಪ್ರಭುತ್ವವನ್ನು ದಯವಿಟ್ಟು ರಕ್ಷಿಸುವಿರಾ? ಎಂಬುದಾಗಿ ಅವರು ಪೋಸ್ಟ್ ಮಾಡಿದ್ದಾರೆ.
ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯನ್ನು ನಿಲ್ಲಿಸಿರುವ ದೇಶಗಳ ಕುರಿತಾಗಿಯೂ ಅವರು ಪೋಸ್ಟ್ ಒಂದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
50 ಮತಗಳ ಕುರಿತು ಪ್ರಶ್ನೆ ಎತ್ತಿದ ಕಮಲ್ ನಾಥ್:
ತಮ್ಮ ಗ್ರಾಮಗಳಲ್ಲಿ 50 ಮತಗಳನ್ನೂ ತಾವು ಗಳಿಸಿಲ್ಲ ಎಂದು ಕೆಲವು ಮಾಜಿ ಶಾಸಕರು ದೂರಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೇಳಿದ್ದಾರೆ. ಮಧ್ಯಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರಾದರೂ, ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸುವುದರಿಂದ ದೂರ ಉಳಿದರು ಎಂದು ndtv.com ವರದಿ ಮಾಡಿದೆ.