ಮೇಘಾಲಯ ವಿಧಾನಸಭೆಯ 4 ಕಾಂಗ್ರೆಸ್ ಶಾಸಕರ ಪೈಕಿ ಮೂವರು ಪಕ್ಷಾಂತರ; ಎನ್‍ಪಿಪಿಗೆ ಸರಳ ಬಹುಮತ

Update: 2024-08-20 07:04 GMT

 ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ (Photo: PTI)

ಗುವಾಹಟಿ: ಮೇಘಾಲಯ ವಿಧಾನಸಭೆಯ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರ ಪೈಕಿ ಮೂವರು ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ವಲಸೆ ಹೋಗಿದ್ದು, ಇದರೊಂದಿಗೆ ಎನ್‍ಪಿಪಿ ವಿಧಾನಸಭೆಯಲ್ಲಿ ಸರಳ ಬಹುಮತ ಗಳಿಸಿದೆ.

ಸೆಲೆಸ್ಟಿನ್ ಲಿಂಗ್ಡೊ, ಚಾಲ್ರ್ಸ್ ಮರ್ನ್‍ಗರ್ ಮತ್ತು ಗ್ಯಾಬ್ರಿಯೆಲ್ ವಹಾಂಗ್ ಅವರು ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಸಮ್ಮುಖದಲ್ಲಿ ಅಧಿಕೃತವಾಗಿ ಎನ್‍ಪಿಪಿ ಸೇರಿದರು. ಇದಕ್ಕೂ ಮುನ್ನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ವಿನ್ಸೆಂಟ್ ಪಾಲಾ, ಮೂವರು ಶಾಸಕರು ಪಕ್ಷ ತೊರೆಯುವ ಸಾಧ್ಯತೆಯನ್ನು ಮನಗಂಡು, ಮೂವರು ಶಾಸಕರನ್ನು ಸಭೆಗೆ ಸಮನ್ಸ್ ಮಾಡಿದ್ದರು. ಇಬ್ಬರು ಸಭೆಗೆ ಹಾಜರಾಗಿರಲಿಲ್ಲ. ನಂಗ್ಸ್ಟೊಯಿನ್ ಶಾಸಕ ವಲ್ಹಾಂಗ್ ಮತ್ತು ಮೌವತಿ ಶಾಸಕ ಮರ್ನ್‍ಗರ್ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಮೂವರು ಶಾಸಕರ ಸೇರ್ಪಡೆಯನ್ನು ವಿಲೀನ ಎಂದು ಪರಿಗಣಿಸಲಾಗುತ್ತದೆ ಹಾಗೂ ಇದು ಪಕ್ಷಾಂತರ ಎನಿಸುವುದಿಲ್ಲ ಎಂದು ಮೇಘಾಲಯ ಸ್ಪೀಕರ್ ಥಾಮಸ್ ಸಂಗ್ಮಾ ಸ್ಪಷ್ಟಪಡಿಸಿದ್ದಾರೆ.

ಶೇಕಡ ಮೂರನೇ ಎರಕ್ಕಿಂತ ಹೆಚ್ಚು ಶಾಸಕರು ಒಂದು ಪಕ್ಷವನ್ನು ತೊರೆದರೆ ಅದು ಪಕ್ಷಾಂತರ ಎನಿಸಿದೇ ವಿಲೀನ ಎಂದು ಅದನ್ನು ಪರಿಗಣಿಸಲಾಗುತ್ತದೆ.

"ಮೂವರು ಕಾಂಗ್ರೆಸ್ ಶಾಸಕರು ನಮ್ಮ ಪಕ್ಷ ಸೇರಿರುವುದು ನಮ್ಮ ಸರ್ಕಾರದ ಮೇಲೆ ಇರಿಸಿದ ವಿಶ್ವಾಸಕ್ಕೆ ಸಾಕ್ಷಿ. ಇದರೊಂದಿಗೆ 60 ಸದಸ್ಯಬಲದ ವಿಧಾನಸಭೆಯಲ್ಲಿ ಪಕ್ಷದ ಸದಸ್ಯಬಲ 31ಕ್ಕೇರಿದೆ" ಎಂದು ಸಿಎಂ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News