ನೂಹ್ ಹಿಂಸಾಚಾರ ಪ್ರಕರಣ: ಕಾಂಗ್ರೆಸ್ ಶಾಸಕನ ಬಂಧನ
ಗುರುಗ್ರಾಮ್/ಚಂಡೀಗಢ: ಜುಲೈ 31ರಂದು ನಡೆದಿದ್ದ ನೂಹ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಾಮ್ಮನ್ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ನೂಹ್ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಯ ನಂತರ ಫಿರೋಝ್ ಪುರ್ ಝೀರ್ಕಾ ಶಾಸಕರಾದ ಮಾಮ್ಮನ್ ಖಾನ್ ಅವರ ಹೆಸರನ್ನು ಎಫ್ ಐ ಆರ್ ನಲ್ಲಿ ನಮೂದಿಸಲಾಗಿದ್ದು, ಕಳೆದ ರಾತ್ರಿ ಅವರನ್ನು ಬಂಧಿಸಲಾಗಿದೆ.
ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಫಿರೋಝ್ ಪುರ್ ಝೀರ್ಕಾ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿಶೇಷ ತನಿಖಾ ತಂಡದ ಮುಖ್ಯಸ್ಥರು ಬಂಧನವನ್ನು ದೃಢಪಡಿಸಿದ್ದಾರೆ.
“ಮಾಮ್ಮನ್ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ನಮಗೆ ಮಾಹಿತಿ ನೀಡಿದ್ದಾರೆ” ಎಂದು ಹರ್ಯಾಣ ವಿಧಾನಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ಉಪ ನಾಯಕರೂ ಕೂಡಾ ಹೇಳಿದ್ದಾರೆ.
ನೂಹ್ ಹಿಂಸಾಚಾರದ ನಂತರ ಎಫ್ ಐ ಆರ್ ನಲ್ಲಿ ಖಾನ್ ಅವರನ್ನು ಹೆಸರಿಸಲಾಗಿದೆ ಎಂದು ಗುರುವಾರ ಹೈಕೋರ್ಟ್ ಗೆ ತಿಳಿಸಿರುವ ಹರ್ಯಾಣ ಸರ್ಕಾರವು, ಈ ಆರೋಪವನ್ನು ಸಮರ್ಥಿಸಲು ಫೋನ್ ಕರೆ ದಾಖಲೆಗಳು ಹಾಗೂ ಇನ್ನಿತರ ಸಾಕ್ಷ್ಯಾಧಾರಗಳು ಲಭ್ಯವಿವೆ ಎಂದು ಪ್ರತಿಪಾದಿಸಿದೆ.
ಮಾಮ್ಮನ್ ಖಾನ್ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಾದ ನಂತರ ಸೆ. 4ರಂದು ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ಹರ್ಯಾಣ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೀಪಕ್ ಸಭರ್ ವಾಲ್ ಹೈಕೋರ್ಟ್ ಗೆ ತಿಳಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಾಮ್ಮನ್ ಖಾನ್ ವಿರುದ್ಧ ಹೇರಳ ಸಾಕ್ಷ್ಯಾಧಾರಗಳಿವೆ” ಎಂದು ಹೇಳಿದ್ದಾರೆ.
ಜುಲೈ 31ರಂದು ನೂಹ್ ನಲ್ಲಿ ನಡೆದಿದ್ದ ವಿಶ‍್ವ ಹಿಂದೂ ಪರಿಷತ್ ಮೆರವಣಿಗೆ ಸಂದರ್ಭ ಉಂಟಾದ ಗಲಭೆಯಲ್ಲಿ ಆರು ಮಂದಿ ಹತ್ಯೆಗೀಡಾಗಿದ್ದರು.