ಸಂವಿಧಾನವನ್ನು ಕಾಗದದ ತುಂಡಿನಂತೆ ಬದಲಾಯಿಸಲಾಗುತ್ತಿದೆ: ಪ್ರಿಯಾಂಕಾ ಗಾಂಧಿ ಆರೋಪ

Update: 2024-04-20 15:55 GMT

ಪ್ರಿಯಾಂಕಾ ಗಾಂಧಿ | PC : PTI 

ತ್ರಿಶೂರು : ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅದು ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಮೀರಿ ಕಾನೂನು ರೂಪಿಸುತ್ತಿದೆ ಹಾಗೂ ಜನರ ಇಚ್ಛೆಗೆ ವಿರುದ್ಧವಾಗಿ ಅವರ ಮೇಲೆ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

‘‘ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮರು ರಕ್ತದಿಂದ ಬರೆದ ಭಾರತದ ಸಂವಿಧಾನವನ್ನು ಬದಲಾಯಿಸುವ ಕುರಿತು ಪ್ರಧಾನಿ ಅವರ ಬೆಂಬಲಿಗರು ಅಹಂಕಾರದಿಂದ ಮಾತನಾಡುತ್ತಿದ್ದಾರೆ’’ ಎಂದು ಅವರು ಹೇಳಿದರು.

ಭಾರತದ ಸಂವಿಧಾನವನ್ನು ಕಾಗದದ ತುಂಡಿನಂತೆ ತಮ್ಮ ದುರಾಶೆ ಹಾಗೂ ಮಹಾತ್ವಾಕಾಂಕ್ಷೆಯ ಸಾಧನವಾಗಿ ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದರು. ಚಾಲಕ್ಕುಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆನ್ನಿ ಬೆಹನಾನ್ ಅವರ ಪರವಾಗಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ಭಾರತ ವಿನಾಶದ ಅಂಚಿನಲ್ಲಿರುವ ಕುರಿತ ಮಾತನಾಡುವಾಗ, ಕೆಲವರು ನೂತನ ಭಾರತವನ್ನು ರೂಪಿಸಲಾಗುತ್ತಿದೆ ಎಂದು ತನ್ನಲ್ಲಿ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಚೀನಾದ ಅತಿಕ್ರಮಣದ ಕುರಿತಂತೆ ಲಡಾಖ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕೇಂದ್ರ ಸರಕಾರ ಮೌನವಾಗಿದೆ. ಚುನಾವಣೆ ಸಮೀಪಿಸುತ್ತಿರುವಾಗ ಮಾತ್ರ ರೈತ ಪರ ಧ್ವನಿಗಳು ಕೇಳಿ ಬರುತ್ತಿವೆ ಎಂದು ಅವರು ಹೇಳಿದರು.

ಈ ನೂತನ ದೇಶದಲ್ಲಿ ಭಿನ್ನಾಭಿಪ್ರಾಯದ ಧ್ವನಿಗಳನ್ನು ಮೌನಗೊಳಿಸಲಾಗಿದೆ. ಸರಕಾರ ಕಿರುಕುಳ ನೀಡುತ್ತಿದೆ, ಆರೋಪ ಮಾಡುತ್ತಿದೆ. ತಮ್ಮ ವಿರುದ್ಧ ಮಾತನಾಡುವವರನ್ನು ಜೈಲಿಗೆ ಹಾಕುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News