“ಪಿಕ್ನಿಕ್ ತಾಣಗಳಲ್ಲ”: ಇತರ ಧರ್ಮೀಯರಿಗೆ ಹಿಂದೂ ದೇವಾಲಯಕ್ಕೆ ಪ್ರವೇಶವನ್ನು ನಿಷೇಧಿಸಿದ ಮದ್ರಾಸ್ ಹೈಕೋರ್ಟ್

Update: 2024-01-31 05:55 GMT

Madras high court (Photo: PTI)

ಮದುರೈ: ಹಿಂದೂಯೇತರರು ಹಿಂದೂ ದೇವಾಲಯಗಳ ಧ್ವಜ ಸ್ತಂಭದಿಂದಾಚೆ ದೇವಾಲಯವನ್ನು ಪ್ರವೇಶಿಸಬಾರದು ಎಂಬ ಸೂಚನಾ ಫಲಕವನ್ನು ಎಲ್ಲ ದೇವಾಲಯಗಳಲ್ಲೂ ಅಳವಡಿಸುವಂತೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮಂಗಳವಾರ ಸೂಚಿಸಿರುವ ಮದ್ರಾಸ್ ಹೈಕೋರ್ಟ್, ಹಿಂದೂಗಳಿಗೆ ತಮ್ಮ ಧರ್ಮವನ್ನು ಬಹಿರಂಗಪಡಿಸುವ ಮತ್ತು ಅನುಸರಿಸುವ ಮೂಲಭೂತ ಹಕ್ಕಿದೆ ಎಂದು ಆದೇಶಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅರುಲ್ ಮಿಗು ಪಳನಿ ದಂಡಾಯುತಪಾಣಿ ಸ್ವಾಮಿ ದೇವಾಲಯ ಹಾಗೂ ಅದರ ಉಪ ದೇವಾಲಯಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶಾವಕಾಶ ಒದಗಿಸಬೇಕು ಎಂದು ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಡಿ.ಸೆಂಥಿಲ್ ಕುಮಾರ್ ಎಂಬವವರ ಅರ್ಜಿ ವಿಚಾರಣೆಯನ್ನು ಮದುರೈ ಹೈಕೋರ್ಟ್ ಪೀಠದ ನ್ಯಾ. ಎಸ್. ಶ್ರೀ ಮತಿ ನಡೆಸಿದರು. ದೇವಾಲಯದ ಎಲ್ಲ ಪ್ರವೇಶ ದ್ವಾರಗಳಲ್ಲೂ ಈ ಸೂಚನಾ ಫಲಕವನ್ನು ಅಳವಡಿಸಲು ನಿರ್ದೇಶನ ನೀಡಬೇಕು ಎಂದೂ ಅರ್ಜಿದಾರರಾದ ಡಿ.ಸೆಂಥಿಲ್ ಕುಮಾರ್ ಮನವಿ ಮಾಡಿದ್ದರು.

ಪ್ರಖ್ಯಾತ ಮುರುಗನ್ ದೇವಾಲಯವು ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿದೆ.

ಈ ಪ್ರಕರಣದಲ್ಲಿ ಪ್ರವಾಸೋಮದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತಿನಿಧಿಸುವ ತಮಿಳುನಾಡು ಸರ್ಕಾರ, ಸಂಸ್ಕೃತಿ ಮತ್ತು ಧಾರ್ಮಿಕ ದತ್ತಿ ಇಲಾಖೆ, ಹಿಂದೂ ಧಾರ್ಮಿಕ ಮತ್ತು ಇಲಾಖೆಯ ಆಯುಕ್ತ ಹಾಗೂ ಪಳನಿ ದೇವಾಲಯದ ಕಾರ್ಯಕಾರಿಣಿ ಅಧಿಕಾರಿಯನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.

ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ತಮಿಳುನಾಡಿನ ದೇವಾಲಯಗಳ ಆಡಳಿತವನ್ನು ನಿರ್ವಹಿಸುತ್ತದೆ.

ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯವು, ಧ್ವಂಜ ಸ್ತಂಭದ ನಂತರ ಹಿಂದೂಯೇತರರು ದೇವಾಲಯವನ್ನು ಪ್ರವೇಶಿಸುವಂತಿಲ್ಲ ಎಂದು ಎಲ್ಲ ದೇವಾಲಯಗಳ ಪ್ರವೇಶದ್ವಾರದ ಬಳಿ ಸೂಚನಾ ಫಲಕ ಅಳವಡಿಸಬೇಕು ಎಂದು ಸೂಚನೆ ನೀಡಿತು.

“ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದವರನ್ನು ಹಿಂದೂ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಪ್ರತಿವಾದಿಗಳಿಗೆ ಸೂಚಿಸುತ್ತೇವೆ. ಯಾರಾದರೂ ಹಿಂದೂಯೇತರ ವ್ಯಕ್ತಿ ದೇವಾಲಯದಲ್ಲಿ ಹಿಂದೂ ದೇವರುಗಳ ದರ್ಶನವನ್ನು ಪಡೆಯಲು ಪ್ರಯತ್ನಿಸಿದರೆ, ಅಂತಹ ವ್ಯಕ್ತಿಯಿಂದ ನನಗೆ ಹಿಂದೂ ಧರ್ಮದ ಪದ್ಧತಿ ಹಾಗೂ ಸಂಪ್ರದಾಯಗಳ ಬಗ್ಗೆ ನಂಬಿಕೆ ಇದೆ ಹಾಗೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮುಚ್ಚಳಿಕೆ ಪಡೆಯಬೇಕು” ಎಂದೂ ನ್ಯಾಯಾಲಯವು ಸೂಚಿಸಿದೆ.

ಅದಕ್ಕೆ ಪ್ರತಿಯಾಗಿ, ಈ ಅರ್ಜಿಯನ್ನು ಪಳನಿ ದೇವಾಲಯಕ್ಕೆ ಸಂಬಂಧಿಸಿದಂತೆ ಮಾತ್ರ ಸಲ್ಲಿಸಿರುವುದರಿಂದ ಆದೇಶವನ್ನು ಆ ದೇವಾಲಯಕ್ಕೇ ಸೀಮಿತಗೊಳಿಸಬೇಕು ಎಂದು ಪ್ರತಿವಾದಿಗಳ ಪರ ವಕೀಲರು ವಾದಿಸಿದರು.

ಅದಕ್ಕೆ ಪ್ರತಿಯಾಗಿ, “ಈ ವಿಷಯವು ವಿಶಾಲ ವ್ಯಾಪ್ತಿಯನ್ನು ಹೊಂದಿರುವುದರಿಂದ ಈ ಆದೇಶವು ಎಲ್ಲ ಹಿಂದೂ ದೇವಾಲಯಗಳಿಗೂ ಅನ್ವಯವಾಗಲಿದೆ. ಸೂಚಿಸಲಾಗಿರುವ ಈ ನಿರ್ಬಂಧಗಳು ಸಮಾಜದಲ್ಲಿನ ವಿವಿಧ ಧರ್ಮಗಳ ನಡುವಿನ ಕೋಮು ಸೌಹಾರ್ದತೆ ಹಾಗೂ ಶಾಂತಿ ಉಳಿಯುವುದನ್ನು ಖಾತರಿ ಪಡಿಸಲಿವೆ. ಹೀಗಾಗಿ ರಾಜ್ಯ ಸರ್ಕಾರ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ, ಪ್ರತಿವಾದಿಗಳು ಹಾಗೂ ದೇವಾಲಯಗಳ ಆಡಳಿತದಲ್ಲಿ ಭಾಗಿಯಾಗಿರುವ ಎಲ್ಲರೂ ಈ ನಿರ್ದೇಶನವನ್ನು ಎಲ್ಲ ಹಿಂದೂ ದೇವಾಲಯಗಳಲ್ಲಿ ಪಾಲಿಸುವಂತೆ ಸೂಚಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News