ನ್ಯಾಯಾಲಯಗಳು ಜಾಮೀನು ನೀಡುವ ಅಥವಾ ನಿರಾಕರಿಸುವ ಮೂಲ ತತ್ವವನ್ನು ಮರೆತಿರುವಂತಿದೆ:ನಿವೃತ್ತ ಸುಪ್ರೀಂ ನ್ಯಾಯಾಧೀಶ ಲೋಕೂರ್
ಹೊಸದಿಲ್ಲಿ: ಜಾಮೀನು ನೀಡುವ ಅಥವಾ ನಿರಾಕರಿಸುವ ಮೂಲ ತತ್ವವನ್ನು ನ್ಯಾಯಾಲಯಗಳು ಮರೆತಿರುವಂತಿದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನ್ಯಾ.ಲೋಕೂರ್ ಹೇಳಿದ್ದಾರೆ.
ಜೀವನದಲ್ಲಿಯ ವಾಸ್ತವತೆಗಳ ಬಗ್ಗೆ ನ್ಯಾಯಾಂಗವು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ನ್ಯಾ.ಲೋಕೂರ್,ರಾಜಕಾರಣಿಗಳನ್ನು ಒಳಗೊಂಡಿರುವ ಪ್ರತಿಯೊಂದೂ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜಕೀಯ ಪ್ರತೀಕಾರವನ್ನು ಆರೋಪಿಸುವುದು ತುಂಬ ಕಷ್ಟವಾಗಿದ್ದರೂ,ಶಂಕಿತ ವ್ಯಕ್ತಿಯು ತನ್ನ ರಾಜಕೀಯ ನಿಷ್ಠೆಯನ್ನು ಬದಲಿಸಿದಾಗ ಆತನ ವಿರುದ್ಧದ ತನಿಖೆಯನ್ನು ಕೈಬಿಟ್ಟಾಗ ಸಂಶಯಗಳು ಉದ್ಭವಿಸುತ್ತವೆ ಎಂದರು.
ಆರೋಪಿಯನ್ನು ಜೈಲಿನಲ್ಲಿಯೇ ಇಡುವ ಏಕೈಕ ಉದ್ದೇಶದಿಂದ ಅಪೂರ್ಣ ದೋಷಾರೋಪಣ ಪಟ್ಟಿಗಳನ್ನು ಸಲ್ಲಿಸುವ ಮತ್ತು ದಾಖಲೆಗಳನ್ನು ಒದಗಿಸದಂತಹ ತನಿಖಾ ಸಂಸ್ಥೆಗಳ ತಂತ್ರಗಳನ್ನು ನೋಡಲು ನ್ಯಾಯಾಂಗದ ಅನಿಚ್ಛೆಯು ಅತ್ಯಂತ ದುರದೃಷ್ಟಕರವಾಗಿದೆ ಎಂದು ಬಣ್ಣಿಸಿದರು.
ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಆಪ್ ನಾಯಕ ಮನೀಷ್ ಸಿಸೋಡಿಯಾ ಗೆ ಜಾಮೀನು ನಿರಾಕರಣೆ ಕುರಿತು ಪ್ರಶ್ನೆಗೆ ನ್ಯಾ.ಲೋಕೂರ್,‘ಸಾಮಾನ್ಯವಾಗಿ ಹೇಳುವುದಾದರೆ ನ್ಯಾಯಾಲಯಗಳು ಜಾಮಿನು ಮಂಜೂರು ಅಥವಾ ನಿರಾಕರಣೆಯ ಮೂಲಭೂತ ತತ್ವವನ್ನು ಮರೆತಿರುವಂತೆ ಕಾಣುತ್ತದೆ. ಇಂದು ಓರ್ವ ವ್ಯಕ್ತಿಯು ಬಂಧಿಸಲ್ಪಟ್ಟರೆ ಆತ ಕನಿಷ್ಠ ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿರುತ್ತಾನೆ ಎಂದು ನೀವು ಖಚಿತವಾಗಿ ಹೇಳಬಹುದು ’ಎಂದು ಉತ್ತರಿಸಿದರು.
ಸರ್ವೋಚ್ಚ ನ್ಯಾಯಾಲಯವು ತನ್ನ ಹಲವಾರು ತೀರ್ಪುಗಳಲ್ಲಿ ಜಾಮೀನು ವಿಷಯಗಳಲ್ಲಿ ವಿವೇಚನಾಧಿಕಾರವನ್ನು ಬಳಸಲು ಮೂಲಭೂತ ತತ್ವಗಳನ್ನು ಸೂಚಿಸಿದೆ. ಸಮಸ್ಯೆ ಏನೆಂದರೆ ಈ ಮೂಲಭೂತ ತತ್ವಗಳು ಗೊತ್ತಿದ್ದರೂ ಕೆಲವು ನ್ಯಾಯಾಲಯಗಳು ಅವುಗಳನ್ನು ಅನ್ವಯಿಸುವುದಿಲ್ಲ. ಏಕೆ ಎನ್ನುವುದು ಇಲ್ಲಿಯ ಪ್ರಶ್ನೆಯಾಗಿದೆ ಎಂದರು.