ಕೇರಳ | ಹೆಚ್ಚುವರಿ ಜಿಲ್ಲಾಧಿಕಾರಿ ಆತ್ಮಹತ್ಯೆ ಪ್ರಕರಣ ; ಸಿಪಿಎಂ ನಾಯಕಿ ದಿವ್ಯಾ ಬಂಧನ
ತಿರುವನಂತಪುರ : ಕೇರಳ ಕಣ್ಣೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಬಾಬು (55) ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪಿ.ಪಿ. ದಿವ್ಯಾ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಣ್ಣೂರಿನ ಸ್ಥಳೀಯ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ತಲಶ್ಶೇರಿಯ ಪ್ರಾಥಮಿಕ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಕೆ.ಟಿ. ನಿಶಾರ್ ಅಹ್ಮದ್ ಸಿಪಿಎಂ ನಾಯಕಿ ದಿವ್ಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನಲೆಯಲ್ಲಿ ದಿವ್ಯಾ ಅವರು ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ. ದಿವ್ಯಾ ಅವರನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ಕಣ್ಣೂರು ಜಿಲ್ಲಾ ಪೊಲೀಸ್ ವರಿಷ್ಠ ಅಜಿತ್ ಕುಮಾರ್ ದೃಢಪಡಿಸಿದ್ದಾರೆ.
ಅಕ್ಟೋಬರ್ 15ರಂದು ಕಣ್ಣೂರು ಜಿಲ್ಲೆಯ ಪಂಚಾಯತ್ ಅಧ್ಯಕ್ಷೆ ಹಾಗೂ ಸಿಪಿಎಂ ನಾಯಕಿ ದಿವ್ಯಾ ಅವರು ಕಾರ್ಯಕ್ರಮವೊಂದರಲ್ಲಿ ನವೀನ್ ಬಾಬು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅವರು ಭ್ರಷ್ಟ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ನವೀನ್ ಬಾಬು ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.