ಮಹಾಯುತಿಯಲ್ಲಿ ಬಿರುಕು: ಅಮಿತ್ ಶಾ ಜತೆ ಮಹಾರಾಷ್ಟ್ರ ಬಿಜೆಪಿ ಮುಖಂಡರ ಚರ್ಚೆ

Update: 2024-10-24 03:19 GMT

PC: PTI

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಸ್ಥಾನ ಹೊಂದಾಣಿಕೆ ಸಂಬಂಧ ಒಡಕು ಮೂಡಿರುವ ಬೆನ್ನಲ್ಲೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಭವಂಕುಲೆ ಅವರು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಮುಂಬೈ ಹಾಗೂ ಸುತ್ತಮುತ್ತಲಿನ ನಾಲ್ಕು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ಶಿವಸೇನೆ ಮುಖಂಡರನ್ನು ಕೆರಳಿಸಿದೆ.

ಬಿಜೆಪಿ ಈಗಾಗಲೇ 99 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದೆ. ಈ ಪೈಕಿ ಕಲ್ಯಾಣ್ ಪೂರ್ವ, ಥಾಣೆ, ನವಿ ಮುಂಬೈ ಮತ್ತು ಮುರ್ಬಾದ್ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿರುವುದರಿಂದ ಶಿವಸೇನೆಯಲ್ಲಿ ಉಂಟಾಗಿರುವ ಅಸಮಾಧಾನವನ್ನು ಶಮನಗೊಳಿಸುವ ಬಗ್ಗೆ ಮುಖಂಡರು ಚರ್ಚಿಸಿದರು ಎನ್ನಲಾಗಿದೆ.

ಈ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಿಲ್ಲ ಎಂದು ಶಿವಸೇನೆ ಬೆದರಿಕೆ ಹಾಕಿದ್ದು, ಇದು ಈ ಪ್ರದೇಶದ ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಕಲ್ಯಾಣ್ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕ ಗಣಪತ್ ಗಾಯಕ್ವಾಡ್ ಅವರ ಪತ್ನಿ ಸುಲಭಾ ಗಾಯಕ್ವಾಡ್ ಅವರನ್ನು ಕಣಕ್ಕೆ ಇಳಿಸಿದೆ. ಶಿವಸೇನೆ ಮುಖಂಡ ಮಹೇಶ್ ಗಾಯಕ್ವಾಡ್ ಅವರ ಮೇಲೆ ಪೊಲೀಸ್ ಠಾಣೆಯಲ್ಲೇ ಗುಂಡು ಹಾರಿಸಿದ ಆರೋಪದಲ್ಲಿ ಗಣಪತ್ ಗಾಯಕ್ವಾಡ್ ಜೈಲಿನಲ್ಲಿದ್ದಾರೆ. ಸುಲಭಾ ಗಾಯಕ್ವಾಡ್ ಅವರ ಉಮೇದುವಾರಿಕೆಯನ್ನು ಶಿವಸೇನೆ ಆರಂಭದಿಂದಲೂ ವಿರೋಧಿಸುತ್ತಾ ಬಂದಿದೆ.

ಸಂಜಯ ಕೇಳ್ಕರ್ ಅವರನ್ನು ಥಾಣೆ ಕ್ಷೇತ್ರದಿಂದ ಬಿಜೆಪಿ ಕಣಕ್ಕೆ ಇಳಿಸಿರುವುದೂ ಶಿವಸೇನೆಗೆ ಪಥ್ಯವಾಗಿಲ್ಲ. ಈ ಕ್ಷೇತ್ರ ಏಕನಾಥ ಶಿಂಧೆ ಅವರ ಭದ್ರಕೋಟೆ ಎನ್ನುವುದು ಶಿವಸೇನೆ ಕಾರ್ಯಕರ್ತರ ಅಭಿಪ್ರಾಯ. ಇದರ ಜತೆಗೆ ನವಿ ಮುಂಬೈನಿಂದ ಗಣೇಶ್ ನಾಯಕ್ ಹಾಗೂ ಮುರ್ಬಾದ್ ಕ್ಷೇತ್ರದಿಂದ ಕಿಶನ್ ಕಠೋರೆ ಉಮೇದುವಾರಿಕೆ ಕೂಡಾ ಶಿವಸೇನೆ ಮುನಿಸಿಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News