ದಿಲ್ಲಿಯ ಹಲವೆಡೆ ವಾಯುಗುಣಮಟ್ಟ ತೀವ್ರ ಕುಸಿತ

Update: 2024-10-23 15:44 GMT

PC : PTI 

ಹೊಸದಿಲ್ಲಿ : ದಿಲ್ಲಿಯಲ್ಲಿ ಬುಧವಾರ ಬೆಳಗ್ಗೆ ದಟ್ಟವಾದ ಹೊಗೆ ಆವರಿಸಿದ ಪರಿಣಾಮವಾಗಿ, ಅಲ್ಲಿನ ವಾಯು ಗುಣಮಟ್ಟವು ಅತ್ಯಂತ ಕಳಪೆ ಶ್ರೇಣಿಗೆ ತಲುಪಿದೆ. ಕೇಂದ್ರಾಡಳಿತ ದಿಲ್ಲಿಯಲ್ಲಿ ಒಟ್ಟಾರೆ ವಾಯುಗುಣಮಟ್ಟ ಸೂಚ್ಯಂಕವು (ಎಕ್ಯೂಐ) 363 ಆಗಿತ್ತು. ದಿಲ್ಲಿಯ ಅನೇಕ ಪ್ರದೇಶಗಳಲ್ಲಿ ವಾಯುಗುಣಮಟ್ಟವು ತೀವ್ರ ಕಳಪೆಯ ಶ್ರೇಣಿಯನ್ನು ತಲುಪಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಜಹಾಂಗೀರ್‌ಪುರಿಯಲ್ಲಿ ವಾಯುಗುಣಮಟ್ಟ (ಎಕ್ಯೂಐ)ವು 418ಕ್ಕೆ ಆಗಿದ್ದು, ಅತ್ಯಂತ ತೀವ್ರತೆಯ ಶ್ರೇಣಿಗೆ ಸೇರ್ಪಡೆಯಾಗಿದೆ. ಅದೇ ರೀತಿ ವಾಯುಗುಣಮಟ್ಟ ಸೂಚ್ಯಂಕವು ವಿವೇಕ ವಿಹಾರ ಪ್ರದೇಶದಲ್ಲಿ 407 ಹಾಗೂ ಆನಂದ ವಿಹಾರ ಪ್ರದೇಶದಲ್ಲಿ 402 ಆಗಿತ್ತು.

ಬೆಳಗ್ಗೆ 9:00 ಗಂಟೆಗೆ ವಾಯಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸೋನಿಯಾ ವಿಹಾರದಲ್ಲಿ 398 ಹಾಗೂ ವಝೀರ್‌ಪುರದಲ್ಲಿ 396 ಆಗಿದ್ದು, ‘ತೀವ್ರ’ ಶ್ರೇಣಿಯ ಅತಿ ಸನಿಹಕ್ಕೆ ಬಂದಿದೆ.

ಬುಧವಾರ ಹೆಚ್ಚುಕಮ್ಮಿ ದಿಲ್ಲಿ ಮಹಾನಗರದ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ದಟ್ಟವಾದ ಹೊಗೆ ಆವರಿಸಿತ್ತೆಂದು ವಾಯುಗುಣಮಟ್ಟ ನಿಗಾ ಘಟಕವು ತಿಳಿಸಿದೆ.

0 ಹಾಗೂ 50ರ ನಡುವಿನ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ)ವನ್ನು ‘ಉತ್ತಮ’, 5ರಿಂದ 100 ಅನ್ನು ತೃಪ್ತಿಕರ, 101ರಿಂದ 200 ಅನ್ನು ಸಾಧಾರಣ, 201ರಿಂದ 300 ಅನ್ನು ಕಳಪೆ, 301ರಿಂದ 400 ಅನ್ನು ಅತ್ಯಂತ ಕಳಪೆ ಹಾಗೂೂ 401ರಿಂದ 500 ಅನ್ನು ಅತ್ಯಂತ ಗಂಭೀರವೆಂದು ಪರಿಗಣಿಸಲಾಗುತ್ತದೆ.

ಈ ಮಧ್ಯೆ ದಿಲ್ಲಿಯಲ್ಲಿ ಕನಿಷ್ಠ ತಾಪಮಾನವು ಬುಧವಾರ 20.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಈ ವರ್ಷದ ಸರಾಸರಿಗಿಂತ ಮೂರು ಅಂಕಗಳಷ್ಟು ಕೆಳಕ್ಕೆ ಜಾರಿದೆ. ಬೆಳಗ್ಗೆ 8:00 ಗಂಟೆಯ ಸುಮಾರಿಗೆ ತೇವಾಂಶವು 34 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

ನೆರೆಯ ರಾಜ್ಯಗಳಾದ ಹರ್ಯಾಣ ಹಾಗೂ ಪಂಜಾಬ್‌ನಲ್ಲಿ ರೈತರು ಹೊಲದಲ್ಲಿರುವ ಬೆಳೆತ್ಯಾಜ್ಯವನ್ನು ಸುಡುವುದರಿಂದ ಉಂಟಾಗುವ ದಟ್ಟ ಹೊಗೆ ದಿಲ್ಲಿ ಮಹಾನಗರವನ್ನು ವ್ಯಾಪಿಸುವುದೇ ವಾಯುಗುಣ ಮಟ್ಟ ಸೂಚ್ಯಂಕ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News