ಲೋಕಸಭೆಯಿಂದ ಕಲ್ಯಾಣ್ ಬ್ಯಾನರ್ಜಿಯನ್ನು ಅಮಾನತುಗೊಳಿಸಿ, ಎಫ್ಐಆರ್ ದಾಖಲಿಸಿ : ಲೋಕಸಭಾ ಸ್ಪೀಕರ್ ಗೆ ಬಿಜೆಪಿ ಸಂಸದರಿಂದ ಪತ್ರ
ಹೊಸದಿಲ್ಲಿ : ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಎಫ್ಐಆರ್ ದಾಖಲಿಸಬೇಕು ಹಾಗೂ ತನಿಖೆಯನ್ನು ಕಾಯ್ದಿರಿಸಿ ಅವರನ್ನು ತಕ್ಷಣವೇ ಸಂಸತ್ತಿನಿಂದ ಅಮಾನತುಗೊಳಿಸಬೇಕು ಎಂದು ಮೂವರು ಬಿಜೆಪಿ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ. ವಕ್ಫ್ ಮಸೂದೆ ಕುರಿತು ನಡೆದಿದ್ದ ಜಂಟಿ ಸದನ ಸಮಿತಿ ಸಭೆಯಲ್ಲಿ ನಡೆದ ಘಟನೆಯನ್ನು ಅವರು ಅಭೂತಪೂರ್ವ ಹಿಂಸಾಚಾರ ಎಂದೂ ಬಣ್ಣಿಸಿದ್ದಾರೆ.
ಬ್ಯಾನರ್ಜಿ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸುವುದನ್ನು ಪರಿಗಣಿಸಲು ಈ ಕುರಿತು ತನಿಖೆ ನಡೆಸಬೇಕು ಎಂದು ಲೋಕಸಭಾ ನೀತಿ ಸಮಿತಿಯನ್ನು ಕೋರಿ ಸಂಸದರಾದ ನಿಶಿಕಾಂತ್ ದುಬೆ, ಅಪರಾಜಿತ ಸಾರಂಗಿ ಹಾಗೂ ಅಭಿಜಿತ್ ಗಂಗೋಪಾಧ್ಯಾಯ್ ಪತ್ರ ಬರೆದಿದ್ದಾರೆ.
ಮಂಗಳವಾರ ನಡೆದಿದ್ದ ಸಭೆಯಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಹಾಗೂ ಬಿಜೆಪಿ ಸಂಸದ ಅಭಿಜಿತ್ ಗಂಗೋಪಾಧ್ಯಾಯ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಗಾಜಿನ ಬಾಟಲಿಯನ್ನು ಒಡೆದಿದ್ದ ಕಲ್ಯಾಣ್ ಬ್ಯಾನರ್ಜಿ, ಅದನ್ನು ಸಮಿತಿಯ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಪೀಠದತ್ತ ತೂರಿದ್ದರು.