ಗ್ರಾಹಕನಿಗೆ 50 ಪೈಸೆ ಹಿಂತಿರುಗಿಸದ ಅಂಚೆ ಇಲಾಖೆಗೆ 15 ಸಾವಿರ ರೂ. ದಂಡ !

Update: 2024-10-23 15:41 GMT
PC : PTI 

ಚೆನ್ನೈ : 50 ಪೈಸೆ ನಾಣ್ಯವು ಈಗಲೂ ಕಾನೂನಾತ್ಮಕವಾಗಿ ಚಲಾವಣೆಯಲ್ಲಿದೆಯಾದರೂ, ಅದರಿಂದ ಈಗ ಒಂದು ಚಾಕಲೇಟ್ ಕೂಡಾ ಖರೀದಿಸಲು ಸಾಧ್ಯವಿಲ್ಲ. ಆದರೆ ಅಂಚೆ ಇಲಾಖೆಯು ತನಗೆ 50 ಪೈಸೆಯನ್ನು ಹಿಂತಿರುಗಿಸದೆ ಇದ್ದುದಕ್ಕಾಗಿ ಮೊಕದ್ದಮೆ ಹೂಡಿದ್ದ ದೂರುದಾರನಿಗೆ, ಹಿಂತಿರುಗಿಸಬೇಕಾಗಿದ್ದ 50 ಪೈಸೆಯನ್ನು, 15 ಸಾವಿರ ದಂಡದೊಂದಿಗೆ ಪಾವತಿಸುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು, ಸ್ಥಳೀಯ ಅಂಚೆ ಕಚೇರಿಗೆ ಆದೇಶಿಸಿದೆ.

2023ರ ಡಿಸೆಂರ್ 3ರಂದು, ಚೆನ್ನೈನ ಗೆರುಗಂಬಾಕ್ಕಂ ನಿವಾಸಿ ಮಾನಶಾ ಎಂಬವರು, ರಿಜಿಸ್ಟರ್ಡ್ ಪತ್ರವೊಂದನ್ನು ಕಳುಹಿಸಲು ಪೊಲಿಚಲೂರ್ ಅಂಚೆ ಕಚೇರಿಗೆ ಆಗಮಿಸಿದ್ದರು. ರಿಜಿಸ್ಟರ್ಡ್ ಪತ್ರ ರವಾನೆಗೆ 29.50 ರೂ. ಶುಲ್ಕವಿದ್ದು, ಅವರು ಕೌಂಟರ್‌ನಲ್ಲಿ 30 ರೂ. ಪಾವತಿಸಿದ್ದರು.

ತನಗೆ 50 ರೂ. ಚಿಲ್ಲರೆಯನ್ನು ಪಾವತಿಸುವಂತೆ ಮಾನಶಾ ಕೇಳಿದಾಗ, ಕಂಪ್ಯೂಟರ್ ವ್ಯವಸ್ಥೆಯು ಆ ಮೊತ್ತವನ್ನು 30 ರೂ.ಗೆ ಸರಿಹೊಂದಿಸಿತೆಂದು ಕಚೇರಿಯ ಸಿಬ್ಬಂದಿ ತಿಳಿಸಿದರು. ಆಗ ಯುಪಿಐ ಮೂಲಕ 50 ಪೈಸೆ ಪಾವತಿಸುವಂತೆ ಮಾನಶಾ ಹೇಳಿದರು. ಆದರೆ ಅಂಚೆಕಚೇರಿಯು ತಾಂತ್ರಿಕ ಕಾರಣ ನೀಡಿ, ಚಿಲ್ಲರೆ ಹಣ ಪಾವತಿಸಲು ನಿರಾಕರಿಸಿತ್ತು.

ಈ ಬಗ್ಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮಾನಶಾ ಅವರು ದೂರು ನೀಡಿದ್ದರು. ದೈನಂದಿನ ಹಣಕಾಸು ವಹಿವಾಟುಗಳಲ್ಲಿ ಚಿಲ್ಲರೆ ಹಣವನ್ನು ‘ರೌಂಡ್ ಆಫ್’ ಮಾಡುವ ಅಂಚೆಕಚೇರಿಯ ಪರಿಪಾಠದಿಂದಾಗಿ ಗಣನೀಯ ಮೊತ್ತದ ಹಣ ಸೋರಿಕೆಯಾಗುತ್ತಿದೆ. ಇದು ಕಪ್ಪುಹಣ ಸಂಗ್ರಹಕ್ಕೆ ಕಾರಣವಾಗುತ್ತದೆ ಹಾಗೂ ಭಾರತದ ಸರಕಾರದ ಜಿಎಸ್‌ಟಿ ಆದಾಯಕ್ಕೆ ನಷ್ಟವಾಗುತ್ತಿದೆ ಎಂದು ಅವರು ಆಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News