ಒಡಿಶಾ ಕರಾವಳಿಗೆ ಅಪ್ಪಳಿಸಲಿರುವ ‘ಡಾನಾ’ ಚಂಡಮಾರುತ

Update: 2024-10-23 17:03 GMT

PC : PTI 

ಭುವನೇಶ್ವರ : ‘ಡಾನಾ’ ಚಂಡಮಾರುತ ಗಂಟೆಗೆ 120 ಕಿ.ಮೀ. ವಾಯು ವೇಗದೊಂದಿಗೆ ಒಡಿಶಾದ ಬಿತಾರ್‌ಕನಿಕಾ ರಾಷ್ಟ್ರೀಯ ಉದ್ಯಾನ ಹಾಗೂ ಧಾಮ್ರಾದ ಬಂದರಿನ ನಡುವೆ ಶುಕ್ರವಾರ ಮುಂಜಾನೆ ಅಪ್ಪಳಿಸಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

‘ಡಾನಾ’ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ಪಶ್ಚಿಮಬಂಗಾಳ ಹಾಗೂ ಒಡಿಶಾ ಸರಕಾರಗಳು ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿವೆ.

ಪಶ್ಚಿಮಬಂಗಾಳ ಸರಕಾರ ಸುಂದರಬನ ಹಾಗೂ ಸಾಗರ್ ಐಲ್ಯಾಂಡ್ ಸೇರಿದಂತೆ ಚಂಡಮಾರುತಕ್ಕೆ ಸುಲಭವಾಗಿ ತುತ್ತಾಗಬಹುದಾದ ಪ್ರದೇಶಗಳಿಂದ 1.14 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ತೆರವು ಕಾರ್ಯಾಚರಣೆಗೆ ನೆರವು ನೀಡಲು ಪಶ್ಚಿಮಬಂಗಾಳದ ವಿಪತ್ತು ನಿರ್ವಹಣಾ ತಂಡದ 13 ಬೆಟಾಲಿಯನ್ ಹಾಗೂ ಎನ್‌ಡಿಆರ್‌ಎಫ್‌ನ 14 ಬೆಟಾಲಿಯನ್‌ಗಳನ್ನು ರಾಜ್ಯದ ಕರಾವಳಿ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಕುರಾ, ಹೂಗ್ಲಿ, ಹೌರಾ, ಉತ್ತರ ಹಾಗೂ ದಕ್ಷಿಣ 24 ಪರಗಣ, ಪಶ್ಚಿಮ ಹಾಗೂ ಪೂರ್ವ ಮೇದಿನಿಪುರ ಹಾಗೂ ಕೋಲ್ಕತ್ತ ಜಿಲ್ಲೆಗಳಿಂದ 2,82,863 ಜನರನ್ನು ತೆರವುಗೊಳಿಸಲು ನಿರ್ಧರಿಸಿದೆ. ಇದುವರೆಗೆ 1,14.313 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ಒಡಿಶಾ ಸರಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್). ಭಾರತೀಯ ತಟ ರಕ್ಷಣಾ ಪಡೆ, ಒಡಿಶಾ ಅಗ್ನಿ ಶಾಮಕ ದಳ ಹಾಗೂ ತುರ್ತು ಸೇವೆ, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆ (ಒಡಿಆರ್‌ಎಎಫ್) ಹಾಗೂ ಇತರ ರಕ್ಷಣಾ ಸಂಸ್ಥೆಗಳಿಗೆ ಸಿದ್ಧವಾಗಿರುವಂತೆ ಸೂಚನೆ ನೀಡಿದೆ ಹಾಗೂ ಚಂಡಮಾರುತದಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇರುವ ಜಿಲ್ಲೆಗಳಲ್ಲಿ ನಿಯೋಜಿಸಿದೆ.

ಒಡಿಶಾ ಸರಕಾರ ಈಗಾಗಲೇ ಎನ್‌ಡಿಆರ್‌ಎಫ್‌ನ 19 ತಂಡ, ಒಡಿಆರ್‌ಎಫ್‌ನ 51 ತಂಡ ಹಾಗೂ 178 ಸೇವಾ ತಂಡಗಳನ್ನು ಸಜ್ಜುಗೊಳಿಸಿದೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯನ್ನು ನಡೆಸಲು ಜಿಲ್ಲೆಗಳಲ್ಲಿ ಹೆಚ್ಚುವರಿ 40 ತಂಡಗಳನ್ನು ನಿಯೋಜಿಸಲಾಗಿದೆ.

ಅಂಗುಲ್, ಪುರಿ, ನಯಾಗರ, ಖುರ್ದಾ, ಕತಕ್, ಜಗತ್ಸಿಂಗ್‌ಪುರ, ಕೇಂದ್ರಪಾರ, ಜಾಜ್‌ಪುರ, ಭದ್ರಾಕ್ ಬಾಲಸೋರೆ, ಕಿಯೋಂಝಾರ್, ಡೆಂಕಾನಾಲ್, ಗಂಜಾಮ್ ಹಾಗೂ ಮಯೂರ್‌ಗಂಜ್ ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಚಂಡಮಾರುತ ಅಪ್ಪಳಿಸುವ ಮುನ್ನ 10 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

‘ಡಾನಾ’ ಚಂಡಮಾರುತದ ಹಿನ್ನೆಲೆಯಲ್ಲಿ ಪೂರ್ವ ಹಾಗೂ ಪೂರ್ವ ಆಗ್ನೇಯ ರೈಲ್ವೆ ಅಕ್ಟೋಬರ್ 24 ಹಾಗೂ 25ರಂದು 150ಕ್ಕೂ ಅಧಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಕೋಲ್ಕತ್ತಾ ವಿಮಾನ ನಿಲ್ದಾಣ ಅಕ್ಟೋಬರ್ 24ರಂದು ಸಂಜೆ 6 ಗಂಟೆಯಿಂದ 15 ಗಂಟೆಗಳ ಕಾಲ ಮುಚ್ಚಿರಲಿದೆ.

► ಶಾಲೆ ಕಾಲೇಜುಗಳಿಗೆ ರಜೆ

ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮಬಂಗಾಳದ 7 ಜಿಲ್ಲೆಗಳಲ್ಲಿ ಬುಧವಾರದಿಂದ ಶುಕ್ರವಾರದ ವರೆಗೆ ಶಾಲೆಗೆ ರಜೆ ನೀಡಲಾಗಿದೆ. ಒಡಿಶಾದ 14 ಜಿಲ್ಲೆಗಳಲ್ಲಿ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News