ರಾಜ್ಯ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ರಾಷ್ಟ್ರಪತಿ, ರಾಜ್ಯಪಾಲರ ಪಾತ್ರ: ಸುಪ್ರೀಂ ತೀರ್ಪಿನ ವಿರುದ್ಧ ಪುನರ್‌ಪರಿಶೀಲನೆ ಅರ್ಜಿ ಸಲ್ಲಿಸಲು ಎಂಎಚ್‌ಎ ಸಜ್ಜು

ಸುಪ್ರೀಂ | PC : PTI
ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯವು ಕಾನೂನು ಅಂಶಗಳಲ್ಲಿ ಕೆಲವು ದೋಷಗಳನ್ನು ಉಲ್ಲೇಖಿಸಿ, ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ತಮಿಳುನಾಡು ಸರಕಾರವು ದಾಖಲಿಸಿದ್ದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಎ.8ರ ಆದೇಶದ ವಿರುದ್ಧ ಪುನರ್‌ಪರಿಶೀಲನೆ ಅರ್ಜಿ ಸಲ್ಲಿಸಲು ಸಜ್ಜಾಗುತ್ತಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶವು ರಾಜ್ಯಗಳ ರಾಜ್ಯಪಾಲರು ಉಲ್ಲೇಖಿಸುವ ಮಸೂದೆಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ರಾಷ್ಟ್ರಪತಿಗಳಿಗೆ ಮೂರು ತಿಂಗಳುಗಳ ಗಡುವನ್ನು ವಿಧಿಸಿರುವುದರಿಂದ ಪುನರ್‌ಪರಿಶೀಲನೆ ಅರ್ಜಿಯನ್ನು ಸಲ್ಲಿಸುವುದನ್ನು ಸಚಿವಾಲಯವು ಪರಿಗಣಿಸುತ್ತಿದೆ ಎಂದು ತಿಳಿಸಿದ ಅಧಿಕಾರಿಗಳು, ಸಂವಿಧಾನದ ವಿಧಿ 201ರಡಿ ಗೃಹ ಸಚಿವಾಲಯವು ಇಂತಹ ಉಲ್ಲೇಖಗಳನ್ನು ಸಂಸ್ಕರಿಸುವ ಮತ್ತು ರಾಷ್ಟ್ರಪತಿಗಳ ನಿರ್ಧಾರಗಳನ್ನು ರಾಜ್ಯಗಳಿಗೆ ತಿಳಿಸುವ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುವುದರಿಂದ ಈ ವಿಷಯವು ನೇರವಾಗಿ ಅದರ ಅಧಿಕಾರ ವ್ಯಾಪ್ತಿಯನ್ನು ಒಳಗೊಂಡಿದೆ ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶವು ಲೋಪದೋಷಗಳಿಂದಾಗಿ ರದ್ದುಗೊಂಡಿರುವ ಮಸೂದೆಗಳಿಗೆ ಮರುಜೀವ ನೀಡಲು ಅವಕಾಶವನ್ನೂ ತೆರೆಯುತ್ತದೆ ಎಂದು ಬೆಟ್ಟು ಮಾಡಿದ ಅಧಿಕಾರಿಗಳು, ಸಾಂವಿಧಾನಿಕ ನಿಬಂಧನೆಗಳಡಿ ಇಂತಹ ಮಸೂದೆಗಳನ್ನು ಅವುಗಳ ಮೂಲರೂಪದಲ್ಲಿ ಅಥವಾ ರಾಷ್ಟ್ರಪತಿಗಳು ಅವುಗಳನ್ನು ವಾಪಸ್ ಮಾಡಿದಾಗ ಸೂಚಿಸಿದ ತಿದ್ದುಪಡಿಗಳೊಂದಿಗೆ ರಾಜ್ಯ ವಿಧಾನಸಭೆಗಳಲ್ಲಿ ಮಂಡಿಸುವ ಮೂಲಕ ಮಾತ್ರ ಮರುಸ್ಥಾಪಿಸಬಹುದು ಎಂದು ಹೇಳಿದರು.
ರಾಷ್ಟ್ರಪತಿಗಳು ಮಸೂದೆಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿದಾಗ ಅದು ರದ್ದುಗೊಂಡಿದೆ ಎಂದು ಪರಿಗಣಿಸಲಾಗುತ್ತದೆ ಎಂದ ಅಧಿಕಾರಿಗಳು, ವಾದಗಳ ಸಂದರ್ಭದಲ್ಲಿ ಕೇಂದ್ರ ಸರಕಾರದ ಅಭಿಪ್ರಾಯಗಳನ್ನು ಸಮರ್ಪಕವಾಗಿ ಮಂಡಿಸಲು ಸಾಧ್ಯವಾಗದ ಕಾರಣ ಪುನರ್‌ಪರಿಶೀಲನೆ ಅರ್ಜಿಯನ್ನು ಸಲ್ಲಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಗಮನಾರ್ಹವಾಗಿ ತಮಿಳುನಾಡು ಸರಕಾರವು ತಡೆಹಿಡಿಯಲ್ಪಟ್ಟಿದ್ದ 10 ಶಾಸನಗಳನ್ನು ಶನಿವಾರ ಸರಕಾರಿ ಗೆಝೆಟ್ ನಲ್ಲಿ ಅಧಿಸೂಚಿಸಿದ್ದು,ಇವು ರಾಷ್ಟ್ರಪತಿಗಳ ಒಪ್ಪಿಗೆ ಪಡೆದಿವೆ ಎಂದು ಪರಿಗಣಿಸಲಾಗಿದೆ ಎಂದು ಹೇಳಿದೆ.