ನರೇಗ ಉದ್ಯೋಗ ದಿನಗಳು, ಮಜೂರಿ ಏರಿಕೆಗೆ ಸಂಸದೀಯ ಸಮಿತಿ ಶಿಫಾರಸು

Update: 2025-04-13 21:32 IST
ನರೇಗ ಉದ್ಯೋಗ ದಿನಗಳು, ಮಜೂರಿ ಏರಿಕೆಗೆ ಸಂಸದೀಯ ಸಮಿತಿ ಶಿಫಾರಸು

ಸಾಂದರ್ಭಿಕ ಚಿತ್ರ | PC : PTI

  • whatsapp icon

ಹೊಸದಿಲ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಮ್‌ಜಿಎನ್‌ಆರ್‌ಇಜಿಎಸ್)ಯ ಪರಿಣಾಮವನ್ನು ಅಂದಾಜಿಸಲು ಸ್ವತಂತ್ರ ಸಮೀಕ್ಷೆ ನಡೆಸಬೇಕು ಎಂದು ಸಂಸದೀಯ ಮಂಡಳಿಯೊಂದು ಸಲಹೆ ನೀಡಿದೆ.

ನೂತನ ಸವಾಲುಗಳ ಹಿನ್ನೆಲೆಯಲ್ಲಿ ಯೋಜನೆಯನ್ನು ಪರಿಷ್ಕರಿಸಬೇಕು ಎಂದು ಅದು ಒತ್ತಾಯಿಸಿದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಇತ್ತೀಚೆಗೆ ಮುಕ್ತಾಯಗೊಂಡಿರುವ ಬಜೆಟ್ ಅಧಿವೇಶನದ ಕೊನೆಯ ವಾರದಲ್ಲಿ ಸಂಸತ್‌ನಲ್ಲಿ ಮಂಡಿಸಿರುವ ವರದಿಯಲ್ಲಿ ಈ ಶಿಫಾರಸನ್ನು ಮಾಡಿದೆ. ವರ್ಷದಲ್ಲಿ ಓರ್ವ ವ್ಯಕ್ತಿಗೆ ನೀಡುವ ಕೆಲಸದ ದಿನಗಳನ್ನು ಈಗಿನ 100ರಿಂದ 150ಕ್ಕೆ ಹೆಚ್ಚಿಸಬೇಕು ಎಂದು ಅದು ಸಲಹೆ ನೀಡಿದೆ. ಅದೂ ಅಲ್ಲದೆ, ಮಜೂರಿಯನ್ನು ದಿನಕ್ಕೆ ಕನಿಷ್ಠ 400 ರೂ.ಗೆ ಹೆಚ್ಚಿಸಬೇಕು ಎಂದು ಹೇಳಿದೆ.

ಮುಂಚೂಣಿಯ ಗ್ರಾಮೀಣ ಉದ್ಯೋಗ ಯೋಜನೆಗೆ ನೀಡುವ ಅನುದಾನದಲ್ಲಿ ಹೆಚ್ಚಳವಾಗದಿರುವ ಬಗ್ಗೆ ಸಮಿತಿಯು ಕಳವಳ ವ್ಯಕ್ತಪಡಿಸುತ್ತಲೇ ಬಂದಿದೆ.

ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಡೆಸುವ ಅಗತ್ಯವನ್ನೂ ಅದು ಪ್ರತಿಪಾದಿಸಿದೆ.

‘‘ಎಮ್‌ಜಿಎನ್‌ಆರ್‌ಇಜಿಎಸ್‌ ನ ಪರಿಣಾಮವನ್ನು ಅಂದಾಜಿಸಲು ಸಮಗ್ರ ರಾಷ್ಟ್ರೀಯ ಸಮೀಕ್ಷೆಯೊಂದನ್ನು ನಡೆಸಬೇಕು ಎಂಬುದಾಗಿ ಸಮಿತಿ ಭಾವಿಸುತ್ತದೆ’’ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಕ ನೇತೃತ್ವದ ಸಮಿತಿ ಹೇಳಿದೆ.

ಸಮೀಕ್ಷೆಯು ಕಾರ್ಮಿಕರ ತೃಪ್ತಿ, ಮಜೂರಿ ವಿಳಂಬ, ಜನರ ಪಾಲ್ಗೊಳ್ಳುವ ಪ್ರವೃತ್ತಿಗಳು ಮತ್ತು ಯೋಜನೆಯೊಳಗೇ ಇರುವ ಹಣಕಾಸು ಅವ್ಯವಹಾರಗಳ ಬಗ್ಗೆ ಗಮನ ಹರಿಸಬೇಕು ಎಂದು ಸಮಿತಿ ತಿಳಿಸಿದೆ.

‘‘ಯೋಜನೆಯ ಪರಿಣಾಮವನ್ನು ಹೆಚ್ಚಿಸುವುದಕ್ಕಾಗಿ ಅದರ ಕೊರತೆಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಪಡೆಯಲು ಮತ್ತು ಅದಕ್ಕೆ ಅನುಗುಣವಾಗಿ ನೀತಿಯಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ದೇಶಾದ್ಯಂತ ಸ್ವತಂತ್ರ ಹಾಗೂ ಪಾರದರ್ಶಕ ಸಮೀಕ್ಷೆಗೆ ಸಮಿತಿ ಶಿಫಾರಸು ಮಾಡುತ್ತದೆ’’ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News