ಮಾನಸಿಕ ಆರೋಗ್ಯಕ್ಕೆ ವರ್ಕ್ ಫ್ರಮ್ ಹೋಮ್ ಪೂರಕವಲ್ಲ: ಅಧ್ಯಯನ ವರದಿ

Update: 2024-10-24 09:10 GMT
ಸಾಂದರ್ಭಿಕ ಚಿತ್ರ PC: freepik

ಹೊಸದಿಲ್ಲಿ: ಕಚೇರಿಯಿಂದ ಕಾರ್ಯ ನಿರ್ವಹಿಸುವ ಬದಲು ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಮ್ ಹೋಮ್) ಸಂಸ್ಕೃತಿ ಮಾನಸಿಕ ಆರೋಗ್ಯಕ್ಕೆ ಮಾರಕ ಎಂದು ಇತ್ತೀಚೆಗೆ ನಡೆದ ಬೃಹತ್ ಜಾಗತಿಕ ಅಧ್ಯಯನವೊಂದು ಬಹಿರಂಗಪಡಿಸಿದೆ.

ಕೆಲಸದ ಒತ್ತಡ ಹಾಗೂ ಸ್ಥಿತಿ ಸ್ಥಾಪಕತ್ವದಂಥ ಕೆಲಸ ಮತ್ತು ಜೀವನದ ನಡುವೆ ಸಮತೋಲನ ವಹಿಸುವುದಕ್ಕಿಂತ, ಕೆಲಸದ ಸ್ಥಳದಲ್ಲಿ ಒಳ್ಳೆಯ ಸಂಬಂಧವನ್ನು ಬೆಳೆಸುವುದು ಮತ್ತು ಕೆಲಸದಲ್ಲಿ ಹೆಮ್ಮೆಯ ಭಾವನೆ ಮಾನಸಿಕ ಆರೋಗ್ಯಕ್ಕೆ ಪ್ರಮುಖ ಎಂದು ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ.

ಕೆಲಸದ ಸಂಸ್ಕೃತಿಯ ಒಂಬತ್ತು ಆಯಾಮಗಳನ್ನು ಈ ಅಧ್ಯಯನದಲ್ಲಿ ಪರಿಗಣಿಸಲಾಗಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಹೋಲಿಸಿದರೆ ಉತ್ತಮ ಮಾನಸಿಕ ಆರೋಗ್ಯ ಸೂಚಕಗಳನ್ನು ಹೊಂದಿದ್ದಾರೆ ಎಂದು ಅಧ್ಯಯನ ಕಂಡುಕೊಂಡಿದೆ. ಆದರೆ ಅಮೆರಿಕ ಮತ್ತು ಯೂರೋಪ್ ನಲ್ಲಿ ಇದಕ್ಕೆ ತದ್ವಿರುದ್ಧ ಪ್ರವೃತ್ತಿ ಇದ್ದು, ಹೈಬ್ರೀಡ್ ಕೆಲಸದ ವಾತಾವರಣ ಉತ್ತಮ ಮಾನಸಿಕ ಆರೋಗ್ಯ ಸೂಚಕಗಳಿಗೆ ಕಾರಣವಾಗಿದೆ.

ಅಮೆರಿಕ ಮೂಲದ ಮಾನಸಿಕ ಸಂಶೋಧನಾ ಸಂಸ್ಥೆ ಸೆಪೀನ್ಸ್ ಲ್ಯಾಬ್, ಶ್ರಮ ಸಂಸ್ಕೃತಿ ಮತ್ತು ಮಾನಸಿಕ ಸುಕ್ಷೇಮ ವಿಷಯದ ಬಗ್ಗೆ ಈ ಅಧ್ಯಯನ ನಡೆಸಿತ್ತು. 65 ದೇಶಗಳ 54,831 ಮಂದಿ ಉದ್ಯೋಗಿಗಳಿಂದ ಇಂಟರ್ ನೆಟ್ ಸಶಕ್ತ ವ್ಯವಸ್ಥೆಯಡಿ ಅಂಕಿ ಅಂಶ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.

ಪುಣೆಯಲ್ಲಿ 26 ವರ್ಷದ ಚಾರ್ಟಡ್ ಅಕೌಂಟೆಂಟ್ ಇತ್ತೀಚೆಗೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಅತ್ಯಧಿಕ ಕೆಲಸದ ಹೊರೆ, ಒತ್ತಡ ಮತ್ತು ವಿಷಮಯ ಉದ್ಯೋಗ ಸ್ಥಳದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ವರದಿ ಬಹಿರಂಗವಾಗಿದೆ. ಉದ್ಯೋಗಿಗಳಲ್ಲಿ ಕೆಲಸದ ಒತ್ತಡವು ಮಾನಸಿಕ ಅಸ್ವಸ್ಥತೆಗೆ ಪ್ರಮುಖ ಕಾರಣ ಎನ್ನುವುದನ್ನು ಅಧ್ಯಯನ ವರದಿ ಪ್ರತಿಪಾದಿಸಿದೆ. ಈ ಉದ್ಯೋಗ- ಜೀವನದ ಸಮತೋಲನದ ಅಂಶಗಳು ಇತರ ಕೆಲ ಮಾನದಂಡಗಳಂತೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ.

"ನೀವು ಯಾವ ಕೆಲಸ ಮಾಡುತ್ತೀರಿ ಎನ್ನುವುದಕ್ಕಿಂತ ಸಹೋದ್ಯೋಗಿಗಳ ಜತೆಗಿನ ಸಂಬಂಧ ಹಾಗೂ ಕೆಲಸದ ಬಗೆಗಿನ ಹೆಮ್ಮೆಯ ಭಾವನೆ, ನಿಮ್ಮ ಕೆಲಸದ ಉದ್ದೇಶದಂಥ ಅಂಶಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಒಳ್ಳೆಯ ಸಂಬಂಧ ಇಲ್ಲದಿರುವುದು ಮತ್ತು ನಿಮ್ಮ ಕೆಲಸದ ಬಗ್ಗೆ ನಿಮಗೆ ಹೆಮ್ಮೆ ಇಲ್ಲದಿರುವುದು ಬೇಸರ ಹಾಗೂ ನಿರೀಕ್ಷೆ ರಹಿತ ಭಾವನೆಗಳು ತೀವ್ರವಾಗಲು ಕಾರಣವಾಗುತ್ತದೆ. ಇದರಿಂದ ಕೆಲಸದ ಶಕ್ತಿ ಮತ್ತು ಪ್ರೇರಣೆಯ ಅಂಶಗಳು ಕಡಿಮೆಯಾಗುತ್ತವೆ ಎಂದು ವಿಶ್ಲೇಷಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News