ಪನ್ನೂನ್ ಪ್ರಕರಣ | ತಪ್ಪಿತಸ್ಥರು ಹೊಣೆಗಾರರಾದಾಗ ಮಾತ್ರ ಸಮಾಧಾನ: ಅಮೆರಿಕ

Update: 2024-10-24 04:10 GMT

Photo: X/ firstpost

ಹೊಸದಿಲ್ಲಿ: ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಮಾಜಿ ಅಧಿಕಾರಿ ವಿಕಾಸ್ ಯಾದವ್ ಅವರ ವಿರುದ್ಧ ಅಮೆರಿಕ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಈ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕ ರಾಯಭಾರಿ, "ಪ್ರಕರಣ ಬಗೆಗೆ ಭಾರತ ನಡೆಸುತ್ತಿರುವ ತನಿಖೆ ಪ್ರಗತಿಯ ಬಗ್ಗೆ ಅಮೆರಿಕಕ್ಕೆ ಸಮಾಧಾನ ಇದೆ. ಆದರೆ ತಪ್ಪಿತಸ್ಥರು ಹೊಣೆಗಾರರಾದಾಗ ಮಾತ್ರ ನಮ್ಮ ದೇಶಕ್ಕೆ ಪರಿಪೂರ್ಣ ಸಮಾಧಾನ ದೊರೆಯುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿರುವ ಎರಿಕ್ ಗರ್ಸೆಟ್ಟಿ Times Of India ಜತೆಗೆ ಮಾತನಾಡಿ, "ಈ ಅಪರಾಧ ಮುಂದುವರಿಯುವುದಿಲ್ಲ ಎನ್ನುವ ಭರವಸೆ ಮಾತ್ರವಲ್ಲದೇ ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು ಎನ್ನುವುದು ಅಮೆರಿಕದ ಇಚ್ಛೆ" ಎಂದು ಸ್ಪಷ್ಟಪಡಿಸಿದರು.

ಶತ್ರುದೇಶಗಳಿಂದ ಅಥವಾ ಮಿತ್ರ ದೇಶಗಳಿಂದಲೇ ಇರಲಿ; ಅಪರಾಧ ಕೃತ್ಯಗಳ ವಿಚಾರದಲ್ಲಿ ಅಮೆರಿಕ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಯಾದವ್ ಅವರ ಗಡೀಪಾರಿಗೆ ಸಂಬಂಧಿಸಿದಂತೆ ಅಮೆರಿಕ ಒತ್ತಡ ತರುತ್ತದೆಯೇ ಎಂದು ಕೇಳಿದಾಗ, ಯಾದವ್ ಬಂಧನದ ಬಳಿಕವಷ್ಟೇ ಅದು ಸಾಧ್ಯ ಎಂದು ಹೇಳಿದರು.

ಕೆನಡಾದಲ್ಲಿ ಖಾಲಿಸ್ತಾನ ಪರ ಪ್ರತ್ಯೇಕತಾವಾದಿ ಚಟುವಟಿಕೆಗಳ ಬಗ್ಗೆ ಮತ್ತು ಅಮೆರಿಕ ನೆಲದಿಂದ ಗುರುಪತ್ವಂತ್ ಸಿಂಗ್ ಪನ್ನೂನ್ ನೀಡಿರುವ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿ, ನೈಜವಾದ ಬೆದರಿಕೆಗಳನ್ನು ಅಮೆರಿಕ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.

ಭಾರತದ ಜತೆಗೆ ಪ್ರಬಲ ಭಯೋತ್ಪಾದನಾ ವಿರೋಧಿ ಸಹಕಾರವನ್ನು ಉಲ್ಲೇಖಿಸಿದ ಗರ್ಸೆಟ್ಟಿ, ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾ ಪ್ರಕರಣವನ್ನು ಉದಾಹರಿಸಿದರು. ಈ ಪ್ರಕರಣದಲ್ಲಿ ಉಭಯ ದೇಶಗಳು ಗಡೀಪಾರು ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News