ಅಗ್ನಿಪಥ ನೀತಿಯನ್ನು ಟೀಕಿಸಿದ್ದೇವೆ, ಭದ್ರತಾ ಪಡೆಗಳ ವಿರುದ್ಧ ಮಾತನಾಡಿಲ್ಲ ; ಚುನಾವಣಾ ಆಯೋಗದ ಪತ್ರಕ್ಕೆ ಉತ್ತರಿಸಿದ ಕಾಂಗ್ರೆಸ್
ಹೊಸದಿಲ್ಲಿ : ಭದ್ರತಾ ಪಡೆಗಳನ್ನು ರಾಜಕೀಕರಣಗೊಳಿಸಬೇಡಿ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದ ಮರುದಿನ, ಶುಕ್ರವಾರ ಅದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅಗ್ನಿಪಥ ಸೇನಾ ನೇಮಕಾತಿ ಯೋಜನೆ ಕುರಿತ ತನ್ನ ಟೀಕೆಯು ಮಾದರಿ ನೀತಿ ಸಂಹಿತೆಯ ಮಿತಿಯೊಳಗೇ ಇದ್ದು, ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಆಯೋಗದ ನೆರವು ಪಡೆಯುತ್ತಿದ್ದಾರೆ ಎಂದು ಆರೋಪಿಸಿದೆ.
ಚುನಾವಣಾ ಆಯೋಗದ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಮಾಜಿ ಯೋಧರ ವಿಭಾಗದ ಮುಖ್ಯಸ್ಥ ನಿವೃತ್ತ ಕರ್ನಲ್ ರೋಹಿತ್ ಚೌಧರಿ, "ಇತರೆ ರಾಜಕೀಯ ಪಕ್ಷಗಳನ್ನು ಟೀಕಿಸುವಾಗ, ಅಂತಹ ಟೀಕೆಗಳು ಅವುಗಳ ನೀತಿಗಳು, ಕಾರ್ಯಕ್ರಮಗಳು ಹಾಗೂ ಅವುಗಳ ಹಿಂದಿನ ಕೆಲಸಗಳ ದಾಖಲೆಗಳಿಗೆ ಸೀಮಿತವಾಗಿರಬೇಕು ಎಂದು ಮಾದರಿ ನೀತಿ ಸಂಹಿತೆ ಹೇಳುತ್ತದೆ” ಎಂದು ಮಾದರಿ ನೀತಿ ಸಂಹಿತೆಯ ನಿಯಮಗಳನ್ನು ಉಲ್ಲೇಖಿಸಿ ಹೇಳಿದರು.
ಎಐಸಿಸಿ ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚೌಧರಿ, ದೇಶವನ್ನು ರಕ್ಷಿಸುವಲ್ಲಿ ಸಶಸ್ತ್ರ ಪಡೆಗಳು ಅದ್ಭುತ ಕೆಲಸವನ್ನು ಮಾಡುತ್ತಿವೆ ಹಾಗೂ ಕಾಂಗ್ರೆಸ್ ಪಕ್ಷವು ಅಗ್ನಿಪಥ ಯೋಜನೆಯ ಕುರಿತು ಮಾತನಾಡುವಾಗ ಕೇವಲ ಸರಕಾರದ ನೀತಿ ಕುರಿತು ಮಾತ್ರ ಮಾತನಾಡುತ್ತಿದೆ ಎಂದು ಹೇಳಿದರು.
ಮೋದಿ ಸರಕಾರವು ಅಗ್ನಿಪಥ ಯೋಜನೆಯನ್ನು ಪರಿಚಯಿಸುವ ಮೂಲಕ ಸೇನೆಯನ್ನು ದುರ್ಬಲಗೊಳಿಸಿದೆ. ನಾವು ದೇಶ, ಸೇನೆ ಹಾಗೂ ಯೋಧರ ಹಿತಾಸಕ್ತಿ ಹೊಂದಿರದ ಈ ಯೋಜನೆಯನ್ನು ಮಾತ್ರ ಪ್ರಶ್ನಿಸುತ್ತಿದ್ದೇವೆ ಎಂದು ಅವರು ಪ್ರತಿಪಾದಿಸಿದರು.
ಇದಕ್ಕೂ ಮುನ್ನ, ಭದ್ರತಾ ಪಡೆಗಳನ್ನು ರಾಜಕೀಕರಣಗೊಳಿಸಬಾರದು ಹಾಗೂ ಸೇನೆಯ ಸಮಾಜೋ-ಆರ್ಥಿಕ ಸಂಯೋಜನೆಯ ಕುರಿತು ಗಂಭೀರ ಸ್ವರೂಪದ ವಿಭಜನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಗುರುವಾರ ಚುನಾವಣಾ ಆಯೋಗವು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿತ್ತು.