ರಾಜ್ಯಸಭಾ ಚುನಾವಣೆ: ಹಿಮಾಚಲ ಪ್ರದೇಶದಲ್ಲಿ 6 ಕಾಂಗ್ರೆಸ್‌ ಶಾಸಕರಿಂದ ಅಡ್ಡ ಮತದಾನ; ಉತ್ತರ ಪ್ರದೇಶದಲ್ಲಿ ನಿಕಟ ಸ್ಪರ್ಧೆ

Update: 2024-02-27 11:23 GMT

Photo: ANI

ಹೊಸದಿಲ್ಲಿ: ಮೂರು ರಾಜ್ಯಗಳಲ್ಲಿ 15 ರಾಜ್ಯಸಭಾ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ರಾಜ್ಯವಾಗಿರುವ ಹಿಮಾಚಲ ಪ್ರದೇಶದಲ್ಲಿ ಅಡ್ಡ ಮತದಾನ ವರದಿಯಾಗಿದ್ದು, ಉತ್ತರ ಪ್ರದೇಶದಲ್ಲಿ ಏಳು ಮಂದಿ ಸಮಾಜವಾದಿ ಪಕ್ಷದ ಶಾಸಕರು ಆಡಳಿತಾರೂಢ ಬಿಜೆಪಿಗೆ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹಿಮಾಚಲ ಪ್ರದೇಶ ವಿಧಾನಸಭೆಯ 68 ಸದಸ್ಯ ಬಲದ ಪೈಕಿ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮೂವರು ಪಕ್ಷೇತರ ಶಾಸಕರ ಬಲವನ್ನೂ ಹೊಂದಿತ್ತು. ಆದರೆ, ಕಾಂಗ್ರೆಸ್ ಪಕ್ಷದ ಆರು ಶಾಸಕರು ಹಾಗೂ ಮೂರೂ ಮಂದಿ ಪಕ್ಷೇತರ ಶಾಸಕರು ಅಡ್ಡ ಮತದಾನ ಮಾಡಿರುವುದರಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಅಭಿಷೇಕ್ ಸಿಂಘ್ವಿ ಸೋಲಿನ ಅಂಚಿನಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹರ್ಷ್ ಮಹಾಜನ್ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸ್ಪರ್ಧೆಗೆ ದೂಡಿದ್ದ ಬಿಜೆಪಿ, ಈಗ ಗೆಲ್ಲುವ ನೆಚ್ಚಿನ ಪಕ್ಷವಾಗಿ ಹೊರ ಹೊಮ್ಮಿದೆ. ಇದರಿಂದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಪ್ರತಿಷ್ಠೆಗೆ ಭಾರಿ ಹಿನ್ನಡೆಯಾಗಲಿದೆ.

ಇಂದು ಬೆಳಗ್ಗೆ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, "ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಒಂದು ಪರೀಕ್ಷೆಯಾಗಿದೆ. ಇದರಿಂದ ನಮ್ಮ ನೈಜ ಸಂಗಾತಿಗಳು ಯಾರು ಎಂಬುದು ತಿಳಿದು ಬರಲಿದೆ" ಎಂದು ಬಂಡಾಯ ಶಾಸಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು.

10 ರಾಜ್ಯಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶದಲ್ಲಿ 252 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಏಳು ಸ್ಥಾನಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದಾಗಿದೆ. ಇದೇ ವೇಳೆ 108 ಸದಸ್ಯ ಬಲವನ್ನು ಹೊಂದಿರುವ ಸಮಾಜವಾದಿ ಪಕ್ಷ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಂಟನೆ ಅಭ್ಯರ್ಥಿಗೆ ಮತ ಕೊರತೆಯಿದ್ದರೂ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಿಜೆಪಿ, ಜಯಂತ್ ಚೌಧರಿ ನೇತೃತ್ವದ ಲೋಕದಳ ಮತಗಳನ್ನು ನೆಚ್ಚಿಕೊಂಡಿದೆ. ಆದರೆ, ಇಂದು ಬೆಳಗ್ಗೆ ಏಳು ಮಂದಿ ಸಮಾಜವಾದಿ ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ಅಖಿಲೇಶ್ ಯಾದವ್‌ಗೆ ಆಘಾತವನ್ನುಂಟು ಮಾಡಿದ್ದು, ಸ್ಪರ್ಧೆ ಬಿರುಸು ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News