267 ಕೆಜಿ ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ಚೆನ್ನೈ ವಿಮಾನ ನಿಲ್ದಾಣದ ಉನ್ನತ ಅಧಿಕಾರಿ ಮೇಲೆ ಕಸ್ಟಮ್ಸ್ ನಿಗಾ
ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದ ನಿರ್ಗಮನ ಲೌಂಜ್‌ನಲ್ಲಿರುವ ಉಡುಗೊರೆ ಶಾಪ್ ಏರ್‌ಹಬ್ ಮೂಲಕ ರೂ 167 ಕೋಟಿ ಮೌಲ್ಯದ 267 ಕೆಜಿ ಚಿನ್ನವನ್ನು ಕಳ್ಳಸಾಗಣಿಕೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಕಸ್ಸಮ್ಸ್ ಇಲಾಖೆಯು ಚೆನ್ನೈನಲ್ಲಿರುವ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಮೇಲೆ ಕಣ್ಣಿಟ್ಟಿದೆ.
ಮೂಲಗಳ ಪ್ರಕಾರ ಏರ್‌ಹಬ್ ಮಾಲೀಕ ಚೆನ್ನೈ ನಗರದ ಸಬೀರ್ ಆಲಿ ಎಂಬವರನ್ನು ಚೆನ್ನೈ ವಿಮಾನ ನಿಲ್ದಾಣ ನಿರ್ದೇಶಕರ ಕಚೇರಿಯು ಎಎಐ ಜಂಟಿ ಮಹಾ ಪ್ರಬಂಧಕ ಸೆಲ್ವನಯಗಂ ಎಂಬವರನ್ನು ಪರಿಚಯಿಸಿತ್ತು. ಸಬೀರ್ ಅವರನ್ನು ಸಂಪರ್ಕಿಸಿದ ಸೆಲ್ವನಯಗಮ್ ಅವರನ್ನು ವಿದ್ವೇದ ಪಿಆರ್‌ಜಿಗೆ ಶಿಫಾರಸು ಮಾಡಿ ಅವರಿಗೆ ಒಂದು ಮಳಿಗೆ ಮಂಜೂರಾತಿಗಾಗಿ ಶಿಫಾರಸು ಮಾಡಿದ್ದರು.
ಈ ವಿದ್ವೇದಾ ಪಿಆರ್‌ಜಿ ಸಂಸ್ಥೆ ಚೆನ್ನೈ ವಿಮಾನ ನಿಲ್ದಾಣದ ಅಧಿಕೃತ ರಿಟೇಲ್ ಸಂಸ್ಥೆಯಾಗಿದ್ದು ಏರ್‌ಹಬ್‌ಗೆ ಜಾಗ ಲೀಸ್ ಮಾಡಿತ್ತು. ಈ ಮಳಿಗೆಯ ಮೂಲಕ ಶ್ರೀಲಂಕದಿಂದ ಚಿನ್ನ ಕಳ್ಳಸಾಗಾಟ ಜಾಲ ಕಾರ್ಯನಿರ್ವಹಿಸುತ್ತಿತ್ತೆನ್ನಲಾಗಿದೆ.
ಸೋಮವಾರ ಸೆಲ್ವನಯಗಂ ಅವರ ಕಾಂಚೀಪುರಂ ಜಿಲ್ಲೆಯ ನಿವಾಸಕ್ಕೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರು ಹಿರಿಯ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೂ ದಾಳಿ ನಡೆದಿವೆ.
ಸಬೀರ್ ಆಲಿ ಅವರಿಗೆ ಯಾವುದೇ ರಿಟೇಲ್ ಮಾರಾಟ ಅನುಭವವಿರದೇ ಇದ್ದರೂ ಅವರಿಗೆ ಮಳಿಗೆ ಮಂಜೂರು ಹೇಗೆ ಮಾಡಲಾಯಿತು, ಇದರ ಹಿಂದೆ ವಿದ್ವೇದ ಅಧಿಕಾರಿಗಳ ಕೈವಾಡವಿದೆಯೇ ಎಂದೂ ತಿಳಿಯುವ ಯತ್ನ ನಡೆಯುತ್ತಿದೆ. ಇದಕ್ಕೂ ಮುಂಚೆ ಸಬೀರ್ ಆಲಿ ಯುಟ್ಯೂಬರ್ ಆಗಿದ್ದರು.
ಸಬೀರ್ ಆಲಿ ಮತ್ತು ಏರ್‌ಹಬ್‌ನ ಏಳು ಉದ್ಯೋಗಿಗಳು 267 ಕೆಜಿ ಚಿನ್ನವನ್ನು ಶ್ರೀಲಂಕಾದಿಂದ ಆಗಮಿಸುವ ಪ್ರಯಾಣಿಕರಿಂದ ಕಳ್ಳಸಾಗಣಿಕೆಗೆ ಅನುವು ಮಾಡಿಕೊಟ್ಟಿದ್ದರೆಂದು ಕಸ್ಟಮ್ಸ್ ತಿಳಿದುಕೊಂಡಿತ್ತು. ಏರ್‌ಹಬ್ ಡೆಪಾಸಿಟ್‌ಗೆ ಅಬು ಧಾಬಿ ಮೂಲದ ಶ್ರೀಲಂಕನ್ ನಾಗರಿಕರೊಬ್ಬರು ಪಾವತಿಸಿದ್ದರು ಅವರು ಸಬೀರ್ ಆಲಿಗೆ ವಿವಿಧ ಖಾತೆಗಳ ಮೂಲಕ ಸುಮಾರು ರೂ 70 ಲಕ್ಷ ಒದಗಿಸಿದ್ದರೆಂದೂ ತನಿಖೆಯಿಂದ ತಿಳಿದುಬಂದಿದೆ.