ತೀರಕ್ಕೆ ಅಪ್ಪಳಿಸಿದ ಚಂಡಮಾರುತ ‘ರೆಮಾಲ್’ | ಪಶ್ಚಿಮ ಬಂಗಾಳದಲ್ಲಿ 2, ಬಾಂಗ್ಲಾದೇಶದಲ್ಲಿ 10 ಮಂದಿ ಸಾವು
ಕೋಲ್ಕತಾ : ಪ್ರಬಲ ಚಂಡಮಾರುತ ‘ರೆಮಾಲ್’ ರವಿವಾರ ರಾತ್ರಿ ತೀರಕ್ಕೆ ಅಪ್ಪಳಿಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಇಬ್ಬರು ಪಶ್ಚಿಮ ಬಂಗಾಳದಲ್ಲಿ ಮೃತಪಟ್ಟರೆ, 10 ಮಂದಿ ಬಾಂಗ್ಲಾದೇಶದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಚಂಡಮಾರುತವು ಪಶ್ಚಿಮ ಬಂಗಾಳದ ಸಾಗರ ದ್ವೀಪ ಮತ್ತು ಬಾಂಗ್ಲಾದೇಶದ ಖೇಪುಪಾರದ ನಡುವೆ ತೀರಕ್ಕೆ ಅಪ್ಪಳಿಸಿದೆ.
ಚಂಡಮಾರುತವು ಕೆಲವು ಸ್ಥಳಗಳಲ್ಲಿ ಗಂಟೆಗೆ 120 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ನೆಲಕ್ಕೆ ಅಪ್ಪಳಿಸಿದೆ ಮತ್ತು ನೂರಾರು ಗ್ರಾಮಗಳು ಜಲಾವೃತವಾಗಿವೆ. ಬಳಿಕ, ಚಂಡಮಾರುತವು ದುರ್ಬಲಗೊಂಡಿದ್ದು, ಗಂಟೆಗೆ 80ರಿಂದ 90 ಕಿ.ಮೀ. ವೇಗದ ಗಾಳಿಯೊಂದಿಗೆ ಮುಂದುವರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ, 51 ವರ್ಷದ ಶೇಖ್ ಸಾಜಿದ್ ಕೋಲ್ಕತಾದ ಎಂಟಲ್ಲಿಯಲ್ಲಿ ಮೃತಪಟ್ಟಿದ್ದಾರೆ. ಕಟ್ಟಡವೊಂದರ ಮೇಲ್ಛಾವಣಿಯು ಅವರ ಮೇಲೆ ಕುಸಿದು ಬಿದ್ದಾಗ ಅವರು ಸಾವನ್ನಪ್ಪಿದ್ದಾರೆ. ಇನ್ನೊಂದು ಘಟನೆಯಲ್ಲಿ, ಬಂಗಾಳ ಕೊಲ್ಲಿಯಲ್ಲಿರುವ ಮೌಸುನಿ ದ್ವೀಪದಲ್ಲಿ ಮರವೊಂದು ಮನೆಯೊಂದರ ಮೇಲೆ ಬಿದ್ದಾಗ 80 ವರ್ಷದ ರೇಣುಕಾ ಮೊಂಡಲ್ ಪ್ರಾಣ ಕಳೆದುಕೊಂಡಿದ್ದಾರೆ.
ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಕೋಲ್ಕತಾ ನಗರದಲ್ಲಿ ಸುಮಾರು 68 ಮರಗಳು ಮತ್ತು ಸಮೀಪದ ಸಾಲ್ಟ್ ಲೇಕ್ನಲ್ಲಿ 75 ಮರಗಳು ಧರೆಗುರುಳಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೋಲ್ಕತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ವಿಮಾನ ಸಂಚಾರ ಪುನರಾರಂಭಗೊಂಡವು. ಅದಕ್ಕೂ ಮೊದಲು, 21 ಗಂಟೆಗಳ ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. 40ಕ್ಕೂ ಅಧಿಕ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು ಮತ್ತು ಐದು ರೈಲುಗಳ ವೇಳಾಪಟ್ಟಿಯನ್ನು ಬದಲಿಸಲಾಗಿತ್ತು.
ಭಾರೀ ಮಳೆಯಿಂದಾಗಿ ಕೋಲ್ಕತಾದ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಚಂಡಮಾರುತ ಅಪ್ಪಳಿಸುವ ಮೊದಲು, ಪಶ್ಚಿಮ ಬಂಗಾಳ ಸರಕಾರವು ಸಾಗರ ದ್ವೀಪ ಮತ್ತು ಸುಂದರ್ಬನ್ಸ್ ಸೇರಿದಂತೆ ಕರಾವಳಿ ವಲಯಗಳಿಂದ ಸುಮಾರು 1.10 ಲಕ್ಷ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿತ್ತು.
ಬಾಂಗ್ಲಾದೇಶದಲ್ಲಿ 10 ಸಾವು
ಬಾಂಗ್ಲಾದೇಶದಲ್ಲಿ ಚಂಡಮಾರುತದ ದಾಳಿಗೆ ಸಿಲುಕಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬರಿಸಾಲ್ ಜಿಲ್ಲೆಯಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
‘‘ಬರಿಸಾಲ ಜಿಲ್ಲೆಯಲ್ಲಿ 1,23,000ಕ್ಕೂ ಅಧಿಕ ಮನೆಗಳು ಚಂಡಮಾರುತದಿಂದಾಗಿ ಹಾನಿಗೀಡಾಗಿವೆ. ಈ ಪೈಕಿ ಸುಮಾರು 31,000 ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ’’ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದರು.
ಚಂಡಮಾರುತದ ಪರಿಣಾಮವಾಗಿ ಬಾಂಗ್ಲಾದೇಶದಲ್ಲಿ 1.25 ಕೋಟಿ ಜನರು ವಿದ್ಯುತ್ ನಿಂದ ವಂಚಿತರಾದರು ಎಂದು ಎಎಫ್ಪಿ ಹೇಳಿದೆ.