ಮೋದಿಯ ರಾಮರಾಜ್ಯದಲ್ಲಿ ದಲಿತರು, ಹಿಂದುಳಿದ ವರ್ಗದವರಿಗೆ ಉದ್ಯೋಗ ಸಿಗದು: ರಾಹುಲ್ ಗಾಂಧಿ

Update: 2024-02-21 15:40 GMT

ರಾಹುಲ್ ಗಾಂಧಿ | Photo: PTI

ಹೊಸದಿಲ್ಲಿ: ಜನಸಂಖ್ಯೆಯ ಶೇ. 90 ಇರುವ ದಲಿತರು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಾಕಷ್ಟು ಉದ್ಯೋಗ ಸೃಷ್ಟಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.

‘‘ಒಟ್ಟು ಜನಸಂಖ್ಯೆಯ ಸುಮಾರು ಶೇ. 90 ಹಿಂದುಳಿದ ವರ್ಗದವರು, ದಲಿತರು, ಬಡುಕಟ್ಟು ಜನರು ಹಾಗೂ ಅಲ್ಪಸಂಖ್ಯಾತರು ಇದ್ದಾರೆ. ಆದರೆ, ಅವರಿಗೆ ಉದ್ಯೋಗ ಸಿಗುತ್ತಿಲ್ಲ. ಇದು ಯಾವ ರೀತಿಯ ರಾಮರಾಜ್ಯ’’ ಎಂದು ಅವರು ಪ್ರಶ್ನಿಸಿದರು.

ಉತ್ತರಪ್ರದೇಶದ ಕಾನ್ಪುರದ ಘಂಟಾಗರ್ ಇಂಟರ್ಸೆಕ್ಷನ್ನಲ್ಲಿ ನಡೆದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಸಾರ್ವಜನಿಕ ಸಭೆಯ ಸಂದರ್ಭ ಅವರು ಮಾತನಾಡಿದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 50 ಹಿಂದುಳಿದ ವರ್ಗದವರು, ಶೇ. 15 ದಲಿತರು, ಶೇ. 8 ಬುಡುಕಟ್ಟು ಸಮುದಾಯದವರು ಹಾಗೂ ಶೇ. 15 ಅಲ್ಪಸಂಖ್ಯಾತರು ಇದ್ದಾರೆ. ಅವರು ಎಷ್ಟು ಬೇಕಾದರೂ ಘೋಷಣೆ ಕೂಗಲಿ. ಆದರೆ, ಅವರು ಹಿಂದುಳಿದ ವರ್ಗ, ದಲಿತ, ಬುಡಕಟ್ಟು ಅಥವಾ ಬಡ ಸಾಮಾನ್ಯ ವರ್ಗಕೆ ಸೇರಿದ್ದರೆ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಅವರು ಉದ್ಯೋಗ ಪಡೆಯುವುದನ್ನು ನರೇಂದ್ರ ಮೋದಿ ಬಯಸುತ್ತಿಲ್ಲ ಎಂದು ಅವರು ಹೇಳಿದರು.

ಮಾಧ್ಯಮ, ದೊಡ್ಡ ಕೈಗಾರಿಕೆ, ಅಧಿಕಾರಶಾಹಿಯಲ್ಲಿ ದಲಿತರು, ಹಿಂದುಳಿದ ವರ್ಗದ ಯಾರೊಬ್ಬರ ಪ್ರತಿನಿಧಿಕರಣ ಇಲ್ಲ. ಭಾರತ ಈ ರೀತಿ ವರ್ಗ ಹಾಗೂ ಜಾತಿಗಳಾಗಿ ವಿಭಜನೆಯಾಗಿದೆ. ದೇಶದಲ್ಲಿ ಜನರು ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಅವರು ಹೇಳಿದರು.

‘‘ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ನೋಡಿದ್ದೀರಿ ಅಲ್ಲವೇ? ಈ ಕಾರ್ಯಕ್ರಮದಲ್ಲಿ ಎಷ್ಟು ಮಂದಿ ಹಿಂದುಳಿದವರು, ದಲಿತರು ಹಾಗೂ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಇದ್ದರು. ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಷ್ಟ್ರಪತಿ (ದ್ರೌಪತಿ ಮುರ್ಮು) ಅವರನ್ನು ಕೂಡ ಆಹ್ವಾನಿಸಲಿಲ್ಲ. ದಲಿತ ಸಮುದಾಯಕ್ಕೆ ಸೇರಿದ ಮಾಜಿ ರಾಷ್ಟ್ರಪತಿ (ರಾಮನಾಥ್ ಕೋವಿಂದ್) ಅವರನ್ನು ಒಳಗೆ ಬಿಡಲಿಲ್ಲ’’ ಎಂದು ಅವರು ಆರೋಪಿಸಿದರು.

ತಮ್ಮ ಪಕ್ಷ ಹಾಗೂ ಮಿತ್ರ ಪಕ್ಷಗಳು ಜಾತಿ ಗಣತಿಗೆ ಆಗ್ರಹಿಸುತ್ತಿವೆ ಎಂದು ಒತ್ತಿ ಹೇಳಿದ ರಾಹುಲ್ ಗಾಂಧಿ, ಈ ರೀತಿಯ ಗಣತಿ ದೇಶದಲ್ಲಿ ಹಿಂದುಳಿದವರ ಯೋಗಕ್ಷೇಮ ಹಾಗೂ ಅವರಲ್ಲಿ ಎಷ್ಟು ಹಣ ಇದೆ ಎಂಬ ಕುರಿತು ತಿಳಿಯಲು ನೆರವಾಗಲಿದೆ ಎಂದರು.

ಜಾತಿ ಗಣತಿಯು ಭಾರತದಲ್ಲಿ ಪ್ರಗತಿಯ ಅತಿ ದೊಡ್ಡ ಕ್ರಾಂತಿಕಾರಿ ಹೆಜ್ಜೆಯಾಗಲಿದೆ ಎಂದು ನಾವು ಹೇಳುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News