ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದ ವಕೀಲ್‌ ಹಸನ್‌ ಮನೆ ನೆಲಸಮಗೊಳಿಸಿದ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ

Update: 2024-02-29 05:58 GMT

ವಕೀಲ್‌ ಹಸನ್‌ (Photo: PTI)

ಹೊಸದಿಲ್ಲಿ: ಉತ್ತರಕಾಶಿ ಸುರಂಗ ಕುಸಿತದ ನಂತರ ನಡೆದ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದ್ದ ವಕೀಲ್‌ ಹಸನ್‌ ಅವರ ಮನೆಯನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಬುಧವಾರ ಬೆಳಿಗ್ಗೆ ನೆಲಸಮಗೊಳಿಸಿದೆ. ಈಶಾನ್ಯ ದಿಲ್ಲಿಯ ಖಜೂರಿ ಖಸ್‌ ಗ್ರಾಮದಲ್ಲಿ ತಾನು ಸ್ವಾಧೀನಪಡಿಸಿಕೊಂಡ ಜಮೀನಿನ ಒತ್ತುವರಿ ತೆರವುಗೊಳಿಸಲ ಈ ನೆಲಸಮ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಪ್ರಾಧಿಕಾರ ಹೇಳಿದೆ. ಈ ಜಮೀನು ಯೋಜಿತ ಅಭಿವೃದ್ಧಿ ಜಮೀನಿನ ಭಾಗವಾಗಿತ್ತು ಎಂದು ಡಿಡಿಎ ಹೇಳಿದೆ.

“ನೆಲಸಮಗೊಳಿಸುವ ಕುರಿತಂತೆ ಯಾವುದೇ ನೋಟಿಸ್‌ ದೊರೆತಿಲ್ಲ. ಸಕ್ರಮ ಕಾಲನಿಯಲ್ಲಿ ನಾವು ವಾಸಿಸುತ್ತಿದ್ದೇವೆ. 2012-13ರಲ್ಲಿ ನನ್ನ ಮನೆ ನಿರ್ಮಿಸಿದ್ದೆ. ಆದರೆ ಡಿಡಿಎ ಬೆಳಿಗ್ಗೆ ದಿಢೀರ್‌ ಎಂದು ಬಂದು ನಮ್ಮನ್ನು ಮನೆಯಿಂದ ಹೊರತಳ್ಳಿದೆ,” ಎಂದು ಹಸನ್‌ ಮಾಧ್ಯಮಗಳಿಗೆ ಹೇಳಿದ್ದಾರೆ.

“ನಾನು ಮತ್ತು ನನ್ನ ಪತ್ನಿ ಮನೆಯಲ್ಲಿರಲಿಲ್ಲ. ಡಿಡಿಎ ಅಧಿಕಾರಿಗಳು ಬರುವಾಗ ನಮ್ಮ ಮೂರು ಮಕ್ಕಳು ಮಾತ್ರ ಮನೆಯಲ್ಲಿದ್ದರು. ಅವರಿಗೆ ಭಯವಾಗಿತ್ತು ಮತ್ತು ನೆಲಸಮ ನಡೆಯುವಾಗ ಅಧಿಕಾರಿಗಳಿಂದ ಅವರಿಗೆ ತೊಂದರೆಯಾಯಿತು. ಈಗ ಎಲ್ಲಿಗೆ ಹೋಗುವುದೆಂದು ತಿಳಿದಿಲ್ಲ. ನಾನು ಮನೆಯತ್ತ ಬಂದಾಗ ಹತ್ತಿರದ ಠಾಣೆಗೆ ನನ್ನನ್ನು ಕರೆದೊಯ್ಯಲಾಯಿತು. ಅಲ್ಲಿ ನನ್ನ ಫೋನ್‌ ವಶಪಡಿಸಿಕೊಂಡಿದ್ದಾರೆ. ಇಷ್ಟು ಬೇಗ ಬಾಡಿಗೆಗೆ ಮನೆ ಸಹ ದೊರೆಯದು,” ಎಂದು ಹಸನ್‌ ಅಲವತ್ತುಕೊಂಡಿದ್ದಾರೆ.

ಈಶಾನ್ಯ ದಿಲ್ಲಿ ಸಂಸದ ಮನೋಜ್‌ ತಿವಾರಿ ಈ ಕುರಿತು ಪ್ರತಕ್ರಿಯಿಸಿ, ಹಸನ್‌ ಅವರಿಗೆ ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆಯ ಪ್ರಯೋಜನ ದೊರೆಯುವಂತೆ ಮಾಡುವುದಾಗಿ ತಿಳಿಸಿದ್ದಾರೆ.

ಡಿಡಿಎ ಸದಸ್ಯ ಹಾಗೂ ಆಪ್‌ ನಾಯಕ ಸೋಮನಾಥ್‌ ಭಾರತಿ ಪ್ರತಿಕ್ರಿಯಿಸಿ ಈ ಪ್ರಕರಣ ಪರಿಶೀಲಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ.

ಕೆಲ ಸಮಯದ ಹಿಂದೆ ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರ ಸುರಂಗ ಕುಸಿದು ಸುಮಾರು 17 ದಿನಗಳ ನಂತರ 41 ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಅಂತಿಮವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಫಲರಾದ ರ‍್ಯಾಟ್‌ ಮೈನರ್ಸ್‌ ತಂಡವನ್ನು ಹಸನ್‌ ಮುನ್ನಡೆಸಿದ್ದರು. ಈ ಕಾರ್ಯಾಚರಣೆ ಯಶಸ್ವಿಯಾದ ನಂತರ ಹಸನ್‌ ಅವರನ್ನು ಅದ್ದೂರಿಯಿಂದ ದಿಲ್ಲಿಗೆ ಬರಮಾಡಿಕೊಳ್ಳಲಾಗಿತ್ತು. ಅವರು ದಿಲ್ಲಿ ಜಲ ಮಂಡಳಿಯ ಗುತಿಗೆದಾರರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News