ಗೋವಾ ಹೋಟೆಲ್ ರೂಂನಲ್ಲಿ ಬ್ರಿಟನ್ ವ್ಯಕ್ತಿಯ ಮೃತದೇಹ ಪತ್ತೆ
ಮರ್ಮಗೋವಾ: ಪಲೋಲೆಪ್ ಹೋಟೆಲ್ ಕೊಠಡಿಯ ಶೌಚಾಲಯದಲ್ಲಿ 62 ವರ್ಷ ವಯಸ್ಸಿನ ಬ್ರಿಟಿಷ್ ಪ್ರಜೆಯ ಮೃತದೇಹ ಶುಕ್ರವಾರ ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಘಟನೆಯೊಂದಿಗೆ ಡಿಸೆಂಬರ್ 31ರ ಬಳಿಕ ವಿದೇಶಿಯರು ಅಸಹಜವಾಗಿ ಮೃತಪಟ್ಟ ಮೂರನೇ ಪ್ರಕರಣ ಕಾಣಕೋಣ ಠಾಣೆಯಲ್ಲಿ ದಾಖಲಾದಂತಾಗಿದೆ.
ಕಳೆದ ಒಂದು ತಿಂಗಳಿನಿಂದ ಬ್ರಿಟನ್ ಮೂಲದ ಆ್ಯಂಡ್ರೂ ಮಾಕ್ ಚಾರ್ಲಂಬಿಡೆಸ್ ಕಾಣಕೋಣದಲ್ಲಿ ವಾಸವಿದ್ದರು ಎನ್ನಲಾಗಿದೆ. ಸಾವಿನ ವೇಳೆ ಕೊಠಡಿಯಲ್ಲಿ ಆತ ಒಬ್ಬಂಟಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹೋಟೆಲ್ ಮಾಲೀಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೃತ ವ್ಯಕ್ತಿಯ ದೇಹದಲ್ಲಿ ಮೇಲ್ನೋಟಕ್ಕೆ ಯಾವುದೇ ಗಾಯದ ಗುರುತುಗಳು ಇಲ್ಲದಿರುವುದರಿಂದ ಈ ಸಾವಿನ ಪ್ರಕರಣದಲ್ಲಿ ಯಾವುದೇ ಸಂದೇಹಗಳಿಲ್ಲ ಎಂದು ತಿಳಿದು ಬಂದಿದೆ. ಭಾರತೀಯ ದಂಡಸಂಹಿತೆ ಸೆಕ್ಷನ್ 174ರ ಅನ್ವಯ ಅಸಹಜ ಸಾವಿನ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‍ಐ ಸ್ವದೇಶ್ ದೇಸಾಯಿ ಹೇಳಿದ್ದಾರೆ. ಈ ಬಗ್ಗೆ ಬ್ರಿಟಿಷ್ ರಾಯಭಾರ ಕಚೇರಿಗೆ ಅಧಿಕೃತ ಮಾಹಿತಿ ನೀಡುವ ಪ್ರಕ್ರಿಯೆಯನ್ನು ಪೊಲೀಸ್ ಇಲಾಖೆ ಆರಂಭಿಸಿದೆ. ಆ ಬಳಿಕ ಚಾಲರ್ಂಬಿಡೆಸ್ ಕುಟುಂಬಕ್ಕೆ ಮಾಹಿತಿ ತಲುಪಬೇಕಿದೆ ಎಂದು ತಿಳಿದು ಬಂದಿದೆ.