ಎನ್‌ಕೌಂಟರ್‌ನಲ್ಲಿ ಆದಿವಾಸಿ ಯುವಕನ ಸಾವು ಪ್ರಕರಣ: ಮರು ತನಿಖೆಗೆ ಜಾರ್ಖಂಡ್ ಹೈಕೋರ್ಟ್ ಆದೇಶ
ರಾಂಚಿ: ಲತೇಹಾರ್ ಜಿಲ್ಲೆಯಲ್ಲಿ 2021ರಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು 24 ವರ್ಷದ ಆದಿವಾಸಿ ಯವಕನನ್ನು ಹತ್ಯೆಗೈದ ಪ್ರಕರಣದ ಮರು ತನಿಖೆ ನಡೆಸುವಂತೆ ಜಾರ್ಖಂಡ್ ಉಚ್ಚ ನ್ಯಾಯಾಲಯ ಕಳೆದ ವಾರ ಆದೇಶಿಸಿದೆ.
ಆದಿವಾಸಿ ಯುವಕ ಬ್ರಹ್ಮದೇವ್ ಸಿಂಗ್ ಅವರನ್ನು 2021 ಜೂನ್ 12ರಂದು ಪಿರಿ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು ಹತ್ಯೆಗೈದಿದ್ದರು. ಸಿಂಗ್ ಅವರು ಆದಿವಾಸಿಗಳ ವಾರ್ಷಿಕ ಆಚರಣೆ ‘ನೇಮ್ ಸರ್‌ಹುಲ್’ನ ಭಾಗವಾಗಿ ಸಣ್ಣ ಪ್ರಾಣಿಗಳ ಬೇಟೆಗೆ ತೆರಳಿದ್ದ 6 ಮಂದಿಯ ಗುಂಪಿನ ಭಾಗವಾಗಿದ್ದರು. ಬೇಟೆಗೆ ಈ ಗುಂಪು ಸ್ಥಳೀಯ ನಿರ್ಮಿತ ಬಂದೂಕು ಕೊಂಡೊಯ್ದಿತ್ತು.
ಯಾವುದೇ ರೀತಿಯ ಎಚ್ಚರಿಕೆ ನೀಡದ ಸಿಂಗ್ ಹಾಗೂ ಇತರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು ಎಂದು ನ್ಯಾಯವಾದಿ ಶೈಲೇಶ್ ಪೊದ್ದಾರ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ‘‘ಬ್ರಹ್ಮದೇವ್ ತನ್ನ ಟಿ ಶರ್ಟ್ ಹಾಗೂ ಪ್ಯಾಂಟ್ ತೆಗೆದು, ಕೈಗಳನ್ನು ಮೇಲಕ್ಕೆತ್ತಿದ್ದರು ಹಾಗೂ ತಾನು ಅಮಾಯಕ ಗ್ರಾಮ ವಾಸಿ ಎಂದು ಮನವಿ ಮಾಡಿದ್ದರು. ಆದರೆ, ಪೊಲೀಸರು ಅವರ ಮೇಲೆ ಗುಂಡು ಹಾರಿಸಿದ್ದರು’’ ಎಂದು ಪೊದ್ದಾರ್ ಪ್ರತಿಪಾದಿಸಿದ್ದಾರೆ.
ಅನಂತರ ಪೊಲೀಸರು ಸಿಂಗ್‌ನ ಅತ್ತೆ ಪನ್‌ಪತಿಯಾ ದೇವಿಯನ್ನು ಅಟ್ಟಿಸಿಕೊಂಡು ಹೋಗಿದ್ದರು ಎಂದು ಪೊದ್ದಾರ್ ಹೇಳಿದ್ದಾರೆ. ಬಳಿಕ ಪೊಲೀಸರು ಸಿಂಗ್‌ನನ್ನು ಹೊತ್ತುಕೊಂಡು ನದಿ ದಂಡೆಯಲ್ಲಿ ಸಾಗಿದ್ದರು. ಆಗ ಸಿಂಗ್ ಜೀವಂತವಿದ್ದರು. ಅವರ ಕೈ ಹಾಗೂ ಪಾದ ನಡುಗುತ್ತಿತ್ತು ಎಂದು ಗ್ರಾಮಸ್ಥರು ಹೇಳಿರುವುದಾಗಿ ಪೊದ್ದಾರ್‌ನ ಪ್ರತಿಪಾದನೆ ಉಲ್ಲೇಖಿಸಿ ಉಚ್ಚ ನ್ಯಾಯಾಲಯ ಅಭಿಪ್ರಾಯಿಸಿದೆ.
ನದಿ ದಾಟಿದ ಮೇಲೆ ಪೊಲೀಸರು ಸಿಂಗ್ ಮೇಲೆ ಮತ್ತೊಮ್ಮೆ ಗುಂಡು ಹಾರಿಸಿ ಹತ್ಯೆಗೈದರು ಹಾಗೂ ಅವರ ಬಟ್ಟೆಗಳನ್ನು ಬದಲಾಯಿಸಿದ್ದರು ಎಂದು ನ್ಯಾಯಾಲಯ ಹೇಳಿದೆ. ಅನಂತರ ಅಮಾಯಕ ಗ್ರಾಮ ನಿವಾಸಿಗಳ ಮೇಲೆ ನಡೆಸಿದ ನಕಲಿ ಎನ್‌ಕೌಂಟರ್ ಅನ್ನು ಮುಚ್ಚಿ ಹಾಕುವ ಪ್ರಯತ್ನದ ಭಾಗವಾಗಿ ಪೊಲೀಸರು ದಿನಪತ್ರಿಕೆಗಳಲ್ಲಿ ಬ್ರಹ್ಮದೇವ್ ನೀಲಿ ಜೀನ್ಸ್ ಹಾಗೂ ಹಳದಿ ಟಿ ಶರ್ಟ್ ಧರಿಸಿದ ಛಾಯಾ ಚಿತ್ರ ಪ್ರಕಟಿಸಿದ್ದರು ಎಂದು ಉಚ್ಚ ನ್ಯಾಯಾಲಯ ಹೇಳಿದೆ.
ಸಿಂಗ್ ಗುಂಡಿನ ಕಾಳಗದಲ್ಲಿ ಮೃತಪಟ್ಟರು ಎಂದು ಪೊಲೀಸರು ಪ್ರತಿಪಾದಿಸಿದ್ದರು. ಅವರು ಸಿಂಗ್ ಹಾಗೂ ಇತರ ಐವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಹತ್ಯೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದ ಪ್ರಥಮ ಮಾಹಿತಿ ವರದಿಯನ್ನು ಕೂಡ ಸಲ್ಲಿಸಿದ್ದರು.
ಸಿಂಗ್ ಅವರ ಪತ್ನಿ ಜಿರಮನಿ ದೇವಿ ಅವರು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ ಬಳಿಕ ಪೊಲೀಸರ ವಿರುದ್ದ ಇನ್ನೊಂದು ಎಫ್‌ಐಆರ್ ದಾಖಲಿಸಲಾಗಿತ್ತು. ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದ ಮ್ಯಾಜಿಸ್ಟ್ರೇಟ್ ಆದೇಶವನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ.
ಜಾರ್ಖಂಡ್‌ನ ಅಪರಾಧ ತನಿಖಾ ಇಲಾಖೆ ಎರಡು ಎಫ್‌ಐಆರ್‌ಗಳ ತನಿಖೆ ನಡೆಸಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ ಈ ಪ್ರಕರಣದ ಕುರಿತ ಮುಕ್ತಾಯ ವರದಿ ಸಲ್ಲಿಸಿತ್ತು. ಆದರೆ ಈ ವರದಿಯಲ್ಲಿ ಸಿಂಗ್ ಅವರ ಸಾವು ಪ್ರಮಾದದಿಂದ ಸಂಭವಿಸಿದೆ ಎಂದು ಒಪ್ಪಿಕೊಳ್ಳಲಾಗಿತ್ತು.
ಮುಕ್ತಾಯದ ವರದಿ ಅವಸರದ ಕ್ರಮವಾಗಿದೆ. ಈ ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಯಬೇಕಾದ ಅಗತ್ಯತೆ ಇದೆ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿವೇದಿ ಹೇಳಿದ್ದಾರೆ.
ಉಚ್ಚ ನ್ಯಾಯಾಲಯ ಮುಕ್ತಾಯ ವರದಿಯನ್ನು ವಜಾಗೊಳಿಸಿದೆ. ಅಲ್ಲದೆ, ಈ ಪ್ರಕರಣದ ಕುರಿತು ತನಿಖೆ ನಡೆಸಲು ಹಾಗೂ ಮೂರು ತಿಂಗಳ ಒಳಗೆ ವರದಿ ಸಲ್ಲಿಸಲು ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದ ಹೊಸ ತಂಡವನ್ನು ರೂಪಿಸಲು ರಾಜ್ಯ ಡಿಜಿಪಿ ಹಾಗೂ ರಾಜ್ಯ ಗೃಹ ಕಾರ್ಯದರ್ಶಿಗೆ ನಿರ್ದೇಶಿಸಿದೆ.