ಫಲಿತಾಂಶದ ಬಳಿಕವಷ್ಟೇ ‘ಇಂಡಿಯಾ’ದ ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಧಾರ : ಖರ್ಗೆ

Update: 2024-04-17 14:19 GMT

 ಮಲ್ಲಿಕಾರ್ಜುನ ಖರ್ಗೆ | PC : ANI 

ಹೊಸದಿಲ್ಲಿ : ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

‘‘ಮೊದಲು ನಾವು ಚುನಾವಣೆಯನ್ನು ಗೆಲ್ಲಬೇಕಾಗಿದೆ. ಬಳಿಕ, ಮೈತ್ರಿಕೂಟದ ಪಾಲುದಾರರ ಅಭಿಪ್ರಾಯಗಳ ಆಧಾರದಲ್ಲಿ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಚರ್ಚೆ ಮಾಡಲಾಗುವುದು’’ ಎಂದು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಖರ್ಗೆ ತಿಳಿಸಿದ್ದಾರೆ. ‘‘ಈ ವಿಷಯದಲ್ಲಿ (ಪ್ರಧಾನಿ ಅಭ್ಯರ್ಥಿಯ ಆಯ್ಕೆ) ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ. ಮೊದಲು ನಾವು ಚುನಾವಣೆಯನ್ನು ಗೆಲ್ಲಬೇಕು’’ ಎಂದು ಅವರು ಹೇಳಿದರು.

ಇಂಡಿಯಾ ನ್ಯಾಶನಲ್ ಡೆವೆಲಪ್ಮೆಂಟಲ್ ಇನ್ಕ್ಲುಸಿವ್ ಅಲಯನ್ಸ್ (ಇಂಡಿಯಾ) ಪ್ರತಿಪಕ್ಷಗಳ ಮೈತ್ರಿಕೂಟವಾಗಿದೆ. ಅದು ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ ಮೈತ್ರಿಕೂಟವನ್ನು ಎದುರಿಸುತ್ತಿದೆ.

ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲಪ್ರದೇಶ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದ, ‘‘ಪರಿಸ್ಥಿತಿ ಧನಾತ್ಮಕ ಮತ್ತು ಪೂರಕವಾಗಿರುವಂತೆ ಕಾಣುತ್ತಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

‘‘ಬೆಲೆ ಇಳಿಕೆ ಮುಂತಾದ ಪ್ರಯೋಜನಗಳನ್ನು ಒದಗಿಸುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನರು ಬಯಸುತ್ತಾರೆ ಎನ್ನುವುದನ್ನು ನಮ್ಮ ಗ್ಯಾರಂಟಿ ಯೋಜನೆಗಳು ಸಾಬೀತುಪಡಿಸಿವೆ. ನಮ್ಮ ಗ್ಯಾರಂಟಿಗಳು ಮತದಾರರ ಮನಸ್ಸನ್ನು ಸೆಳೆದಿವೆ’’ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

ಅದೇ ವೇಳೆ, ಈ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು 400ಕ್ಕಿಂತಲೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಗಳನ್ನು ಕಾಂಗ್ರೆಸ್ ಅಧ್ಯಕ್ಷರು ಟೀಕಿಸಿದರು. ‘‘ಈ ರೀತಿಯ ಅತಿ ಆತ್ಮವಿಶ್ವಾಸ ಮತ್ತು ಅಹಂಕಾರ ದೇಶ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ’’ ಎಂದು ಅವರು ಅಭಿಪ್ರಾಯಪಟ್ಟಿದರು.

‘‘ಅದೃಷ್ಟವಶಾತ್, ‘ಅಬ್ ಕಿ ಬಾರ್ 600 ಪಾರ್’ (ಈ ಬಾರಿ 600ಕ್ಕಿಂತ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ) ಎಂಬುದಾಗಿ ಅವರು ಹೇಳಿಲ್ಲ. ಈ ದುರಹಂಕಾರದ ಪ್ರಚಾರ ಕಾಂಡವು, ಪ್ರತಿಪಕ್ಷಗಳನ್ನು ಕಡೆಗಣಿಸುತ್ತದೆ ಮತ್ತು ‘ಎಲ್ಲಾ ನಾನೇ’ ಎಂಬ ಮನೋಭಾವವನ್ನು ಬಿಂಬಿಸುತ್ತದೆ. ಇದು ದುರದೃಷ್ಟಕರ. ಅಧಿಕಾರಕ್ಕೆ ಮರಳುವ ಆತ್ಮವಿಶ್ವಾಸವುಳ್ಳ ನಾಯಕರೂ ಈ ರೀತಿಯಾಗಿ ಮಾತನಾಡುವುದಿಲ್ಲ. ಅವರು ಈಗಾಗಲೇ, ಕಾರ್ಯದರ್ಶಿಗಳನ್ನು ಕರೆಸಿಕೊಂಡು ಮುಂದಿನ ಐದು ವರ್ಷಗಳಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News