ಸರಕಾರಿ ನೌಕರರು ಆರೆಸ್ಸೆಸ್ ಸೇರುವುದರ ಮೇಲಿನ ನಿಷೇಧ ಹಿಂದೆಗೆದುಕೊಂಡ ಕಡತಗಳ ‘ವರ್ಗೀಕರಣ’: ವರದಿ

Update: 2024-08-01 11:53 GMT

Photo : indianexpress.com

ಹೊಸದಿಲ್ಲಿ: ಸರಕಾರಿ ನೌಕರರು ಆರೆಸ್ಸೆಸ್‌ಗೆ ಸೇರುವುದರ ಮೇಲಿನ 58 ವರ್ಷಗಳ ಹಿಂದಿನ ನಿಷೇಧವನ್ನು ಹಿಂದೆಗೆದುಕೊಂಡ ತನ್ನ ನಿರ್ಧಾರಕ್ಕೆ ಸಂಬಂಧಿಸಿದ ಕಡತಗಳನ್ನು ಕೇಂದ್ರವು ‘ವರ್ಗೀಕರಿಸಿದೆ’ ಎಂದು ವರದಿಯು ತಿಳಿಸಿದೆ.

ಕೇಂದ್ರವು ಜು.9ರಂದು ಈ ನಿಷೇಧವನ್ನು ಹಿಂದೆಗೆದುಕೊಂಡಿದ್ದು, ಆದೇಶದ ಪ್ರತಿಯನ್ನು ತಕ್ಷಣ ಸಾರ್ವಜನಿಕರಿಗೆ ಲಭ್ಯಗೊಳಿಸಿರಲಿಲ್ಲ. ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಿಷೇಧವನ್ನು ಹಿಂದೆಗೆದುಕೊಂಡ ಅಧಿಕೃತ ಆದೇಶವನ್ನು ಸಾರ್ವಜನಿಕರ ಅವಗಾಹನೆಗಾಗಿ ಬುಧವಾರ ತಮ್ಮ ವೆಬ್‌ಸೈಟ್‌ಗಳಲ್ಲಿ ಬಿಡುಗಡೆಗೊಳಿಸಿವೆ.

ಆದೇಶದಲ್ಲಿ ಉಲ್ಲೇಖಿಸಲಾದ ದಾಖಲೆಯ ಪ್ರತಿಯನ್ನು ಕೋರಿ ಸುದ್ದಿ ಜಾಲತಾಣ ‘ದಿ ವೈರ್’ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿತ್ತು.ಆದರೆ, ಕಡತವನ್ನು ವರ್ಗೀಕರಿಸಲಾಗಿದೆ, ಹೀಗಾಗಿ ಅದನ್ನು ಬಹಿರಂಗಗೊಳಿಸುವಂತಿಲ್ಲ ಎಂಬ ಕಾರಣ ನೀಡಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದೆ.

ನಿಷೇಧದ ವಿಷಯವು ಕೆಲವು ಸಮಯದಿಂದ ಸರಕಾರದ ಪರಿಶೀಲನೆಯಲ್ಲಿತ್ತು ಎಂದು ಇಲಾಖೆಯ ಅಪರಿಚಿತ ಅಧಿಕಾರಿಗಳನ್ನು ಉಲ್ಲೇಖಿಸಿ ‘ದಿ ವೈರ್’ ವರದಿ ಮಾಡಿದೆ.

ಮಾಜಿ ಸರಕಾರಿ ಉದ್ಯೋಗಿಯೋರ್ವರ ಅರ್ಜಿಯ ಮೇರೆಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ನಿಷೇಧವನ್ನು ಹಿಂದೆಗೆದುಕೊಂಡು ಆದೇಶಿಸಿತ್ತು. ನಿಷೇಧವನ್ನು ಹಿಂದೆಗೆದುಕೊಂಡ ಆದೇಶವನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆ ಅದು ಜು.25ರಂದು ಗೃಹ ಸಚಿವಾಲಯ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನಿರ್ದೇಶನ ನೀಡಿತ್ತು.

ಸರಕಾರಿ ನೌಕರರು ಆರೆಸ್ಸೆಸ್ ಸೇರುವುದನ್ನು ನಿಷೇಧಿಸಿದ್ದ ತನ್ನ ತಪ್ಪನ್ನು ಅರಿತುಕೊಳ್ಳಲು ಕೇಂದ್ರಕ್ಕೆ ಐದು ದಶಕಗಳು ಬೇಕಾಯಿತು ಎಂದು ಹೇಳಿದ್ದ ಉಚ್ಚ ನ್ಯಾಯಾಲಯವು, ಈ ವಿಷಯವನ್ನು ತನ್ನ ಗಮನಕ್ಕೆ ತಂದ ಬಳಿಕವೇ ನಿಷೇಧವನ್ನು ಹಿಂದೆಗೆದುಕೊಳ್ಳಲಾಗಿದೆ ಎಂದಿತ್ತು.

ನಿಷೇಧವನ್ನು ಹಿಂದೆಗೆದುಕೊಂಡ ಕೇಂದ್ರದ ಕ್ರಮವನ್ನು ಪ್ರತಿಪಕ್ಷಗಳು ಟೀಕಿಸಿವೆ.

ಬುಧವಾರ ರಾಜ್ಯಸಭೆಯಲ್ಲಿ ಎಸ್‌ಪಿ ಸಂಸದ ರಾಮ್ಜಿಲಾಲ ಸುಮನ್ ಅವರು ಆರೆಸ್ಸೆಸ್‌ನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ಹೋಲಿಸಿದರು. ನೀಟ್-ಯುಜಿ ಪರೀಕ್ಷೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಸುತ್ತ ಸೃಷ್ಟಿಯಾಗಿರುವ ವಿವಾದಗಳಿಂದಾಗಿ ಎನ್‌ಟಿಎ ತೀವ್ರ ಟೀಕೆಗಳಿಗೆ ಗುರಿಯಾಗಿದೆ.

ಎನ್‌ಟಿಎಯಿಂದ ಪರೀಕ್ಷೆಗಳ ನಿರ್ವಹಣೆ ಕುರಿತು ಶಿವಸೇನೆ(ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿಯವರ ಪ್ರಶ್ನೆಗೆ ಪೂರಕವಾಗಿ ಪ್ರಶ್ನೆಯನ್ನು ಕೇಳಿದ್ದ ಸುಮನ್,ಆರೆಸ್ಸೆಸ್‌ಗೆ ಸೇರಿದವರೇ ಅಥವಾ ಇಲ್ಲವೇ ಎನ್ನುವುದು ವ್ಯಕ್ತಿಯ ಮೌಲ್ಯಮಾಪನಕ್ಕೆ ಬಿಜೆಪಿಯ ಏಕೈಕ ಮಾನದಂಡವಾಗಿದೆ ಎಂದು ಹೇಳಿದ್ದರು. ಇದನ್ನು ಆಕ್ಷೇಪಿಸಿದ ಸಭಾಪತಿ ಜಗದೀಪ ಧನ್ಕರ್ ಅವರು,ಆರೆಸ್ಸೆಸ್ ‘ಜಾಗತಿಕ ಚಿಂತನ ಚಾವಡಿ’ಯಾಗಿದೆ ಮತ್ತು ಮೂಲಭೂತ ಹಕ್ಕುಗಳ ಕುರಿತು ವ್ಯವಹರಿಸುವ ಸಂವಿಧಾನದ 12ರಿಂದ 35ನೇ ವಿಧಿ ಅದು ಈ ದೇಶದಲ್ಲಿ ಕಾರ್ಯಾಚರಿಸಲು ಅವಕಾಶವನ್ನು ನೀಡಿದೆ. ಆರೆಸ್ಸೆಸ್ ಈ ದೇಶದ ಅಭಿವೃದ್ಧಿ ಪಯಣದಲ್ಲಿ ಭಾಗಿಯಾಗಲು ಸಂಪೂರ್ಣ ಸಾಂವಿಧಾನಿಕ ಹಕ್ಕುಗಳನ್ನು ಹೊಂದಿರುವ ಸಂಸ್ಥೆಯಾಗಿದೆ ಎಂದು ಎಂದು ಹೇಳಿದರು.

ಧನ್ಕರ್ ಹೇಳಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದವು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News