ಪಾಲುದಾರಿಕೆಯಲ್ಲಿ 23 ಸೈನಿಕ ಶಾಲೆಗಳ ಸ್ಥಾಪನೆಗೆ ರಕ್ಷಣಾ ಸಚಿವರ ಅನುಮೋದನೆ
ಹೊಸದಿಲ್ಲಿ: ಪಾಲುದಾರಿಕೆಯಲ್ಲಿ 23 ಸೈನಿಕ ಶಾಲೆಗಳ ಸ್ಥಾಪನೆಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅನುಮೋದಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
ಪಾಲುದಾರಿಕೆ ವಿಧಾನದಲ್ಲಿ ನೂತನ ಶಾಲೆಗಳು ಆಯಾ ಶಿಕ್ಷಣ ಮಂಡಳಿಗಳೊಂದಿಗೆ ತಮ್ಮ ಸಂಯೋಜನೆಯೊಂದಿಗೆ ಸೈನಿಕ ಸ್ಕೂಲ್ಸ್ ಸೊಸೈಟಿಯ ಅಧೀನದಲ್ಲಿ ಕಾರ್ಯ ನಿರ್ವಹಿಸಲಿವೆ ಮತ್ತು ಸೊಸೈಟಿಯು ತರುವ ನಿಯಮಗಳು ಹಾಗೂ ನಿಬಂಧನೆಗಳನ್ನು ಅನುಸರಿಸಲಿವೆ ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಎನ್ ಜಿ ಒಗಳು, ಖಾಸಗಿ ಶಾಲೆಗಳು ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ವರ್ಗವಾರು ಶ್ರೇಣೀಕೃತ ರೀತಿಯಲ್ಲಿ ಆರನೇ ತರಗತಿಯಿಂದ ಆರಂಭಗೊಳ್ಳುವ 100 ನೂತನ ಸೈನಿಕ ಶಾಲೆಗಳನ್ನು ಸ್ಥಾಪಿಸಲು ಸರಕಾರವು ಅನುಮೋದಿಸಿದೆ. ಈ ಯೋಜನೆಯಡಿ ಸೈನಿಕ ಸ್ಕೂಲ್ಸ್ ಸೊಸೈಟಿಯು ದೇಶಾದ್ಯಂತದ 19 ನೂತನ ಸೈನಿಕ ಶಾಲೆಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ ಎಂದು ತಿಳಿಸಿದೆ.
ಈ ಕ್ರಮದಿಂದಾಗಿ ಈಗಾಗಲೇ ಹಿಂದಿನ ಮಾದರಿಯಲ್ಲಿ ಸೈನಿಕ ಸ್ಕೂಲ್ಸ್ ಸೊಸೈಟಿಯ ಅಧೀನದಲ್ಲಿರುವ 33 ಸೈನಿಕ ಶಾಲೆಗಳಲ್ಲದೇ,ನೂತನ ಸೈನಿಕ ಶಾಲೆಗಳ ಸಂಖ್ಯೆಯನ್ನು 42ಕ್ಕೆ ಹೆಚ್ಚಿಸಿದೆ ಎಂದು ಸಚಿವಾಲಯವು ತಿಳಿಸಿದೆ.