ಪದವಿಗಳಿಂದ ಯಾವುದೇ ಉಪಯೋಗವಿಲ್ಲ, ಜೀವನೋಪಾಯಕ್ಕಾಗಿ ಪಂಕ್ಚರ್ ಅಂಗಡಿ ತೆರೆಯಿರಿ: ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕ ಸಲಹೆ

Update: 2024-07-16 08:21 GMT

ಶಾಸಕ ಪನ್ನಾಲಾಲ್ ಶಾಕ್ಯ (Photo: Facebook/Pannalal Shakya)

ಗುನಾ (ಮಧ್ಯಪ್ರದೇಶ): ಪದವಿಗಳಿಂದ ಯಾವುದೇ ಉಪಯೋಗವಿಲ್ಲ. ಜೀವನೋಪಾಯಕ್ಕಾಗಿ ಪಂಕ್ಚರ್ ಅಂಗಡಿ ತೆರೆಯಿರಿ ಎಂದು ಸೋಮವಾರ ಮಧ್ಯಪ್ರದೇಶದ ಗುನಾ ವಿಧಾನಸಭಾ ಕ್ಷೇತ್ರದ ಶಾಸಕ ಪನ್ನಾಲಾಲ್ ಶಾಕ್ಯ ವಿದ್ಯಾರ್ಥಿಗಳಿಗೆ ವಿವಾದಾತ್ಮಕ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ. ಅವರು ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಕಾಲೇಜಿನ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಇದಕ್ಕೂ ಮುನ್ನ, ರವಿವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ 55 ಜಿಲ್ಲೆಗಳಲ್ಲಿ ವರ್ಚುಯಲ್ ಕಾನ್ಫರೆನ್ಸ್ ಮೂಲಕ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಕಾಲೇಜುಗಳನ್ನು ಉದ್ಘಾಟಿಸಿದ್ದರು. ಇದರ ನಂತರ, ಈ ಜಿಲ್ಲೆಗಳಲ್ಲಿ ಪ್ರತ್ಯೇಕ ಸಮಾರಂಭಗಳನ್ಮು ಆಯೋಜಿಸಲಾಗಿತ್ತು.

ಸೋಮವಾರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶಾಕ್ಯ, "ನಾವು ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಅನ್ನು ಇಂದು ತೆರೆಯುತ್ತಿದ್ದೇವೆ. ಆದರೆ, ಒಂದು ವಾಕ್ಯವನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ - ಈ ಕಾಲೇಜು ಪದವಿಗಳಿಂದ ಯಾವುದೇ ಉಪಯೋಗವಿಲ್ಲ. ಕನಿಷ್ಠ ಪಕ್ಷ ಜೀವನೋಪಾಯಕ್ಕಾಗಿ ಮೋಟರ್ ಸೈಕಲ್ ಪಂಕ್ಚರ್ ಅಂಗಡಿಗಳನ್ನು ಇಟ್ಟುಕೊಳ್ಳಿ" ಎಂದು ಸಲಹೆ ನೀಡಿದ್ದಾರೆ.

ಅವರ ಹೇಳಿಕೆಯ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಿಗೇ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಶಾಸಕ ಪನ್ನಾಲಾಲ್ ಶಾಕ್ಯ ಸ್ಪಷ್ಟೀಕರಣ ನೀಡಿದ್ದಾರೆ.

ಪನ್ನಾಲಾಲ್ ಶಾಕ್ಯ ಇದಕ್ಕೂ ಮುನ್ನ ಕೂಡಾ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಹಿನ್ನೆಲೆ ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News