ಹೊಸದಿಲ್ಲಿ: ತಂದೆ, ನಾಲ್ವರು ಪುತ್ರಿಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2024-09-28 05:37 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ತಮ್ಮ ಮನೆಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ದಿಲ್ಲಿಯ ರಂಗಪುರಿ ಗ್ರಾಮದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ.

ಮೃತರನ್ನು ಹೀರಾಲಾಲ್ ಶರ್ಮಾ(46) ಮತ್ತು ಅವರ ನಾಲ್ವರು ಪುತ್ರಿಯರಾದ ನೀತು(26) ನಿಕ್ಕಿ(24) ನೀರು(23) ಮತ್ತು ನಿಧಿ(20 ) ಎಂದು ಗುರುತಿಸಲಾಗಿದೆ. ಶರ್ಮಾ ಅವರ ಮೃತದೇಹ ಒಂದು ಕೋಣೆಯಲ್ಲಿ ಪತ್ತೆಯಾಗಿದ್ದರೆ, ಅವರ ಹೆಣ್ಣುಮಕ್ಕಳ ಮೃತದೇಹ ಇನ್ನೊಂದು ಕೋಣೆಯಲ್ಲಿ ಪತ್ತೆಯಾಗಿದೆ.

ಶುಕ್ರವಾರ ಬೆಳಿಗ್ಗೆ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ತೆರಳಿ ಬಾಗಿಲು ಒಡೆದು ಪರಿಶೀಲನೆ ನಡೆಸಿದಾಗ ತಂದೆ ಮತ್ತು ನಾಲ್ವರು ಹೆಣ್ಣು ಮಕ್ಕಳ ಮೃತದೇಹ ಪತ್ತೆಯಾಗಿದೆ.

ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ, ಆದರೆ ಮನೆಯೊಳಗೆ ಅನುಮಾನಾಸ್ಪದ ದ್ರವವನ್ನು ಹೊಂದಿದ್ದ ಐದು ಗ್ಲಾಸ್‌ಗಳು ಮತ್ತು ವಿಷದ ಮೂರು ಪ್ಯಾಕೆಟ್‌ಗಳು ಪತ್ತೆಯಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಹೀರಾಲಾಲ್ ಶರ್ಮಾ ಅವರ ಪತ್ನಿ ಮೃತಪಟ್ಟಿದ್ದರು. ಹೀರಾಲಾಲ್ ಶರ್ಮಾ ಅವರ ನಾಲ್ವರು ಹೆಣ್ಣು ಮಕ್ಕಳು ಕೂಡ ಅಂಗವಿಕಲರಾಗಿದ್ದಾರೆ. ಶರ್ಮಾ ತನ್ನ ಮಕ್ಕಳಿಗೆ ವಿಷ ನೀಡಿದ ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News