ಯಮುನಾ ನದಿಯಲ್ಲಿ ಮುಳುಗೆದ್ದಿದ್ದ ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ್ ಆಸ್ಪತ್ರೆಗೆ ದಾಖಲು

Update: 2024-10-26 13:25 GMT

PC : ANI 

ಹೊಸದಿಲ್ಲಿ : ದಿಲ್ಲಿಯ ಆಪ್ ಸರಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ಎರಡು ದಿನಗಳ ಹಿಂದೆ ಯಮುನಾ ನದಿಯಲ್ಲಿ ಮುಳುಗೆದ್ದಿದ್ದ ದಿಲ್ಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್ ದೇವ್ ಗೆ ಉಸಿರಾಟದ ತೊಂದರೆ ಹಾಗೂ ಚರ್ಮ ತುರಿಕೆ ಪ್ರಾರಂಭಗೊಂಡಿದ್ದರಿಂದ, ಅವರನ್ನು ಶನಿವಾರ ಬೆಳಗ್ಗೆ RML ನರ್ಸಿಂಗ್ ಹೋಮ್ ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಿಲ್ಲಿ ಸರಕಾರದ ಭ್ರಷ್ಟಾಚಾರವನ್ನು ಪ್ರತಿಭಟಿಸಿ ಎರಡು ದಿನಗಳ ಹಿಂದೆ ಐಟಿಒ ಬಳಿಯ ಘಾಟ್ ಒಂದರ ಸಮೀಪ ಹರಿಯುವ ಯಮುನಾ ನದಿಯಲ್ಲಿ ವೀರೇಂದ್ರ ಸಚ್ ದೇವ್ ಮುಳುಗೆದ್ದಿದ್ದರು. ಯಮುನಾ ನದಿಯ ಶುದ್ಧೀಕರಣಕ್ಕೆ ಮೀಸಲಾಗಿರುವ ನಿಧಿಯನ್ನು ಆಪ್ ಸರಕಾರ ಒದಗಿಸುತ್ತಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದ್ದರು.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ದಿಲ್ಲಿ ಬಿಜೆಪಿ ಘಟಕ, “ವೀರೇಂದ್ರ ಸಚ್ ದೇವ್ ಗಂಭೀರ ಸ್ವರೂಪದ ಚರ್ಮ ತುರಿಕೆ ಅನುಭವಿಸುತ್ತಿದ್ದು, ಅವರಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದೆ. ಅವರಿಗೆ ಈ ಹಿಂದೆ ಚರ್ಮ ತುರಿಕೆ ಅಥವಾ ಉಸಿರಾಟದ ಸಮಸ್ಯೆ ಇರಲಿಲ್ಲ” ಎಂದು ತಿಳಿಸಿದೆ.

ಯಮುನಾ ನದಿ ತೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಯಮುನಾ ನದಿಯ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಆಪ್ ನಾಯಕರು, ದಿಲ್ಲಿ ಮುಖ್ಯಮಂತ್ರಿ ಅತಿಶಿ ಹಾಗೂ ಆಪ್ ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೆ ವೀರೇಂದ್ರ ಸಚ್ ದೇವ್ ಸವಾಲೆಸೆದಿದ್ದರು.

ಯಮುನಾ ನದಿ ಶುದ್ಧೀಕರಣಕ್ಕೆಂದು ಕೇಂದ್ರ ಸರಕಾರ ಒದಗಿಸಿದ್ದ ರೂ. 8,500 ಕೋಟಿಯನ್ನು ಆಪ್ ಸರಕಾರ ದುರಪಯೋಗಪಡಿಸಿಕೊಂಡಿದ್ದು, ಆ ಮೊತ್ತಕ್ಕೆ ಆಪ್ ಸರಕಾರ ಲೆಕ್ಕ ನೀಡಬೇಕು ಎಂದೂ ಅವರು ಆಗ್ರಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News